ಪಾಕಿಸ್ತಾನದ ಹಾದಿಯಲ್ಲಿ ಬಾಂಗ್ಲಾದೇಶ

ವಿಜಯವಾಣಿ (4)
Published on

ಒಂದಿಷ್ಟು ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡು ಅಭಿವೃದ್ಧಿ ಹಾದಿಯಲ್ಲಿ ಕ್ರಮಿಸುತ್ತಿದ್ದ ಬಾಂಗ್ಲಾದೇಶ ಈಗ ಮತ್ತೆ ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಪಾಕಿಸ್ತಾನದಂತೆ ಮೂಲಭೂತವಾದದತ್ತ ವಾಲುತ್ತಿರುವ ಬಾಂಗ್ಲಾದ ಸ್ಥಿತಿ ಶೋಚನೀಯವಾಗುತ್ತಿದ್ದು, ಮುಂದಿನ ದಿನಗಳು ಮತ್ತಷ್ಟು ಕರಾಳ ಎನ್ನುವ ಸ್ಥಿತಿ ಸೃಷ್ಟಿಯಾಗಿದೆ.

ಬಾಂಗ್ಲಾದೇಶದ ಆರ್ಥಿಕ ಚೈತನ್ಯವೇ ಜವಳಿ ಉದ್ಯಮ. ಬಾಂಗ್ಲಾದೇಶದ ಒಟ್ಟು ಸರಕು ರಫ್ತಿನಲ್ಲಿ ಶೇಕಡ 80ರಷ್ಟು ಪಾಲು ಜವಳಿ ಉದ್ಯಮದ್ದೇ. 2023-24ನೇ ಆರ್ಥಿಕ ವರ್ಷದಲ್ಲಿ 38.4 ಬಿಲಿಯನ್ ಡಾಲರ್ ಅಂದರೆ 3.22 ಲಕ್ಷ ಕೋಟಿ ರೂ. ಮೌಲ್ಯದ ಜವಳಿ ಉತ್ಪನ್ನವನ್ನು ಬಾಂಗ್ಲಾದೇಶ ರಫ್ತು ಮಾಡಿದೆ. ಅವಾಮಿ ಲೀಗ್​ನ ಶೇಖ್ ಹಸೀನಾ ಪ್ರಧಾನಿ ಆಗಿರುವವರೆಗೂ ಈ ಉದ್ಯಮಕ್ಕೆ ಯಾವುದೇ ಆತಂಕ, ಕಳವಳ ಇರಲಿಲ್ಲ. ವಿದೇಶಿ ಬಂಡವಾಳ ಹೂಡಿಕೆಯೂ ಸಮಾಧಾನಕರ ಮಟ್ಟಿಗಿತ್ತು. ಆದರೆ, ಕಳೆದ ವರ್ಷದ (2024) ಆಗಸ್ಟ್ 5ರಂದು ತಥಾಕಥಿತ ವಿದ್ಯಾರ್ಥಿ ಆಂದೋಲನದ ಹೆಸರಲ್ಲಿ ಬಾಂಗ್ಲಾ ಮತ್ತೊಮ್ಮೆ ರಾಜಕೀಯ ಅಸ್ಥಿರತೆಗೆ ಸಿಲುಕಿತು. ಪ್ರಾಣಭಯದಿಂದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಬಂದು ರಾಜಕೀಯ ಆಶ್ರಯ ಪಡೆದಿದ್ದಾರೆ.

ಮಧ್ಯಂತರ ಸರ್ಕಾರ ರಚನೆಯಾಗಿದ್ದರೂ, ಅದು ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ, ಸೇನೆ ಮತ್ತು ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೆ ಏರಿದೆ. ಹೀಗಾಗಿ, ಸೇನೆಯೇ ಮತ್ತೆ ಶೇಖ್ ಹಸೀನಾರನ್ನು ಬಾಂಗ್ಲಾಗೆ ಕರೆಸಿ, ಪ್ರಧಾನಿ ಮಾಡಲು ತಯಾರಿ ನಡೆಸಿದೆ ಎಂಬ ಮಾತುಗಳು ರಾಜಕೀಯ ಹಾಗೂ ಸೇನಾ ಅಂಗಳದಲ್ಲಿ ಜೋರಾಗಿಯೇ ಕೇಳಿಬರುತ್ತಿವೆ.

8 ಸಾವಿರಕ್ಕೂ ಅಧಿಕ ಕಾರ್ಖಾನೆಗಳು

ಬೃಹತ್, ಮಧ್ಯಮ, ಸಣ್ಣ ಸೇರಿದಂತೆ ಗಾರ್ವೆಂಟ್ಸ್​ನ 8 ಸಾವಿರಕ್ಕೂ ಅಧಿಕ ಫ್ಯಾಕ್ಟರಿಗಳು ಬಾಂಗ್ಲಾದೇಶದಲ್ಲಿ ಇವೆ. ಇವು ಪ್ರತ್ಯಕ್ಷವಾಗಿ 50 ಲಕ್ಷ ಜನರಿಗೆ, ಅಪ್ರತ್ಯಕ್ಷವಾಗಿ 1.5 ಕೋಟಿ ಜನರಿಗೆ ಉದ್ಯೋಗ ನೀಡಿವೆ. 15ರಿಂದ 20 ಸಾವಿರ ಕಾರ್ವಿುಕರನ್ನು ಹೊಂದಿರುವ ಮೂರು ಸಾವಿರ ಫ್ಯಾಕ್ಟರಿಗಳಿವೆ. 8ರಿಂದ 10 ಸಾವಿರ ಕಾರ್ವಿುಕರನ್ನು ಹೊಂದಿರುವ 5 ಸಾವಿರಕ್ಕೂ ಅಧಿಕ ಕಂಪನಿಗಳಿವೆ. ಆದರೆ, ಇದೇ ವೇಗದಲ್ಲಿ ಕಂಪನಿಗಳು ಬಾಗಿಲು ಹಾಕಿದರೆ ಬಾಂಗ್ಲಾಗೆ ಕಷ್ಟದ ದಿನಗಳು ದೂರವಿಲ್ಲ.

ಸಂಬಳಕ್ಕಾಗಿ ಹೋರಾಟ

ಬಾಂಗ್ಲಾದೇಶ ಗಾರ್ವೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಆಂಡ್ ಎಕ್ಸ್​ಪೋರ್ಟ್ಸ್ ಅಸೋಸಿಯೇಷನ್ (ಬಿಜಿಎಂಇ) ಹೇಳುವ ಪ್ರಕಾರ ಕಳೆದ ಏಳು ತಿಂಗಳಲ್ಲೇ ಬಾಂಗ್ಲಾದೇಶದ ಗಾರ್ವೆಂಟ್ಸ್ ಉದ್ಯಮದ ಆರ್ಡರ್​ಗಳಲ್ಲಿ ಶೇಕಡ 20ರಷ್ಟು ಕುಸಿತ ಸಂಭವಿಸಿದೆ. ಈ 20% ಆರ್ಡರ್​ಗಳು ಶ್ರೀಲಂಕಾ, ಭಾರತ, ವಿಯೆಟ್ನಾಂ, ಇಂಡೋನೇಷ್ಯಾ ಹಾಗೂ ಪಾಕಿಸ್ತಾನಕ್ಕೆ ದೊರೆಯುತ್ತಿವೆ. ಆರ್ಡರ್​ಗಳ ಕೊರತೆಯಿಂದ ಕಾರ್ಖಾನೆಗಳು ಕ್ರಮೇಣ ಬಾಗಿಲು ಹಾಕುತ್ತಿವೆ. ಕೆಲ ಕಾರ್ಖಾನೆಗಳು ಕೆಲಸಗಾರರ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿವೆ. ಇನ್ನು ಕೆಲ ಕಾರ್ಖಾನೆಗಳಂತೂ 2ರಿಂದ 14 ತಿಂಗಳ ವೇತನವನ್ನು ಬಾಕಿ ಇರಿಸಿಕೊಂಡಿರುವುದರಿಂದ ಕೆಲಸಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಬಾಕಿ ಉಳಿದಿರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಕೆಲಸಗಾರರು ಕುಟುಂಬಸಮೇತ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೂ, ಕಾರ್ಖಾನೆಗಳ ಮಾಲೀಕರು ಸಂಬಳ ಪಾವತಿಸಲಿಲ್ಲ. ಮಧ್ಯಂತರ ಸರ್ಕಾರವೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಗಾಯದ ಮೇಲೆ ಬರೆ

ಬಾಂಗ್ಲಾದೇಶದಲ್ಲಿ ಬಡತನ ಮತ್ತು ನಿರುದ್ಯೋಗ ದೊಡ್ಡ ಸಮಸ್ಯೆ. ಆದರೆ, ಜವಳಿ ಕಾರ್ಖಾನೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಗಿಟ್ಟಿಸಿಕೊಂಡು, ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಯತ್ನಿಸುತ್ತಿದ್ದರು. ಆದರೆ, 2024ರ ಆಗಸ್ಟ್​ನಿಂದ 2025ರ ಫೆಬ್ರವರಿವರೆಗಿನ 7 ತಿಂಗಳಲ್ಲೇ ಜವಳಿಯ 140 ದೊಡ್ಡ ಕಾರ್ಖಾನೆಗಳು ಬಾಗಿಲು ಹಾಕಿವೆ. ಈ ಪೈಕಿ ಎಷ್ಟೋ ಕಾರ್ಖಾನೆಗಳ ಮಾಲೀಕರು ಬಾಂಗ್ಲಾದೇಶದಿಂದ ಪಲಾಯನಗೈದಿದ್ದಾರೆ. ಇದಕ್ಕೆ ಕಾರಣ ಇವರು ಅವಾಮಿ ಲೀಗ್ ಮತ್ತು ಶೇಖ್ ಹಸೀನಾ ಬೆಂಬಲಿಗರಾಗಿದ್ದರು. ಗಾಜಿಪುರ, ಸಾವರ್, ನಾರಾಯಣಗಂಜ್ ಮತ್ತು ನರ್ಸಿದಿ ಪ್ರದೇಶಗಳಲ್ಲೇ 50ಕ್ಕೂ ಹೆಚ್ಚು ಕಾರ್ಖಾನೆಗಳು ಶಾಶ್ವತವಾಗಿ ಬಾಗಿಲು ಹಾಕಿದ್ದರೆ, ಇನ್ನೂ 40 ಕಾರ್ಖಾನೆಗಳು ಮುಚ್ಚುವ ಹಂತದಲ್ಲಿವೆ.

ಮೂಲಭೂತವಾದಿಗಳ ಭಯದಿಂದ ಕಾರ್ಖಾನೆಯನ್ನು ಇದ್ದ ಸ್ಥಿತಿಯಲ್ಲೇ ಬಿಟ್ಟು ಹೋಗಿದ್ದಾರೆ. ಗಾರ್ವೆಂಟ್ಸ್​ನ 140 ಫ್ಯಾಕ್ಟರಿಗಳು ಮುಚ್ಚಿರುವುದರಿಂದ 1 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ. ಈ ಪೈಕಿ ಹೆಚ್ಚಿನ ಸಂಖ್ಯೆ ಮಹಿಳೆಯರದ್ದು. ಬಡ ಕುಟುಂಬಗಳ ಈ ಮಹಿಳೆಯರು ಹಲವಾರು ವರ್ಷಗಳಿಂದ ಜವಳಿ ಉದ್ಯಮದ ಕೆಲಸದಲ್ಲಿ ತೊಡಗಿರುವುದರಿಂದ ಅವರಿಗೆ ಈ ಉದ್ಯಮ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ರಾಜಕೀಯ ಅಸ್ಥಿರತೆಗೆ ನಲುಗಿದ ಜವಳಿ ಉದ್ಯಮ ಏಳೇ ತಿಂಗಳಲ್ಲಿ 140 ಗಾರ್ವೆಂಟ್ಸ್ ಕಾರ್ಖಾನೆಗಳಿಗೆ ಬೀಗ. ಕೆಲಸ ಕಳೆದುಕೊಂಡ 1 ಲಕ್ಷ ಜನರು. ರಂಜಾನ್ ಬಳಿಕ ಇನ್ನಷ್ಟು ಕಾರ್ಖಾನೆಗಳು ಬಂದ್.

ಮತ್ತಷ್ಟು ಬಿಗಡಾಯಿಸಲಿದೆ ಸ್ಥಿತಿ

ರಂಜಾನ್ ಸಮೀಪಿಸುತ್ತಿರುವುದರಿಂದ ಕೆಲ ಜವಳಿ ಕಾರ್ಖಾನೆಗಳು ಬಂದಿರುವ ಆರ್ಡರ್​ಗಳನ್ನು ಪೂರೈಸಿ ಕೊಡುತ್ತಿವೆ. ಆದರೆ, ರಂಜಾನ್ ಹಬ್ಬದ ಬಳಿಕ ಇನ್ನಷ್ಟು ಕಾರ್ಖಾನೆಗಳು ಬಾಗಿಲು ಹಾಕಲಿದ್ದು, ಮತ್ತೆ ಸಾವಿರಾರು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ. ಅಂದರೆ, ಬಾಂಗ್ಲಾದೇಶದ ಒಟ್ಟು ಆಂತರಿಕ ಉತ್ಪನ್ನದ ಶಕ್ತಿಯಾದ ಜವಳಿ ಉದ್ಯಮದ ಸ್ಥಿತಿ ಕ್ರಮೇಣ ಮತ್ತಷ್ಟು ಬಿಗಡಾಯಿಸಲಿದೆ. ವಿಶ್ವದ ಬಲಾಢ್ಯ ಕಂಪನಿಗಳು ಕೂಡ ಈಗ ಬಾಂಗ್ಲಾದೇಶದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿಲ್ಲ. ಈಗಾಗಲೇ ನೆಲೆಗೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು ಮುಂದೇನು ಎಂದು ತಿಳಿಯದೆ, ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಶರಣಾಗಿವೆ.

ಬಾಂಗ್ಲಾದಲ್ಲಿ ಉಡುಪು ತಯಾರಿಕೆ ಗೃಹ ಉದ್ಯಮವಾಗಿಯೂ ಪ್ರಸಿದ್ಧವಾಗಿದೆ. ಹಾಗಾಗಿ, ಬಹಳಷ್ಟು ಕಂಪನಿಗಳು ಕಡಿಮೆ ಕೂಲಿಯಲ್ಲಿ ಹೊರಗುತ್ತಿಗೆ ಮುಖಾಂತರ ಇಲ್ಲಿ ಉಡುಪು ತಯಾರಿಸಿಕೊಳ್ಳುತ್ತವೆ. ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಉತ್ತಮ ಆದಾಯ. ಸ್ಥಳೀಯರಿಗೂ ಒಂದಿಷ್ಟು ಆದಾಯದ ಮೂಲ. ಆದರೆ, ಈಗ ಇಡೀ ಉದ್ಯಮದ ಮೇಲೆ ಸಂಕಷ್ಟದ ಕಾರ್ಮೋಡ ಕವಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net