ಹುಬ್ಬಳ್ಳಿಯಲ್ಲೂ ಬಾಂಗ್ಲಾ ವಲಸಿಗರ ಬೇರು?

bangala jan 08 2020
Published on

ಹುಬ್ಬಳ್ಳಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ)ಬಗ್ಗೆ ಪರ ಮತ್ತು ವಿರುದ್ಧ ಪ್ರತಿಭಟನೆಗಳಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಬೇರುಬಿಟ್ಟಿದ್ದು, ಅವರ ಪತ್ತೆ ಸ್ವಲ್ಪ ಸವಾಲಾಗಿದೆ.

ಹಲವು ವರ್ಷಗಳ ಹಿಂದೆಯೇ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಬಾಂಗ್ಲಾ ವಲಸಿಗರು, ಬೆಂಗಳೂರು, ಹುಬ್ಬಳ್ಳಿಯಂತಹ ಮಹಾ ನಗರಗಳಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿದ್ದಾರೆ. ಕೂಲಿ, ಕಟ್ಟಡ ಕಾಮಗಾರಿ, ಭಿಕ್ಷೆ ಬೇಡುವುದು, ಫಕೀರರಾಗಿ ಅಲೆದಾಡುವುದು ಸೇರಿ ಇನ್ನಿತರ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದಾರೆ.

ಹಳೇ ಹುಬ್ಬಳ್ಳಿ, ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶ, ಇರಾನಿ ಕಾಲನಿ, ಹುಬ್ಬಳ್ಳಿಯ ಗೋಕುಲ, ತಾರಿಹಾಳ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ವಿುಕರ ಸೋಗಿನಲ್ಲಿ ಕೆಲವು ನುಸುಳುಕೋರರು ಸೇರಿಕೊಂಡಿರುವ ಶಂಕೆಯಿದೆ. ಹತ್ತಾರು ವರ್ಷಗಳಿಂದ ಕಾರ್ವಿುಕರಾಗಿ, ಸ್ಥಳೀಯರಂತೆಯೇ ಬದುಕು ಸವೆಸುತ್ತಿದ್ದಾರೆ. ಕಡಿಮೆ ಸಂಬಳವಿದ್ದರೂ ಹೊಂದಿಕೊಂಡು ಇಲ್ಲೇ ವಾಸವಾಗಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು.

ಏಜೆಂಟರ ಸಹಕಾರ: ಕೋಲ್ಕತ, ಪಾಟ್ನಾ, ಲಖನೌ, ಚಿಕನ್​ನೆಕ್, ದಿಸ್ಪುರ್ ಸೇರಿ ವಿವಿಧ ಮಹಾನಗರಗಳಲ್ಲಿ ಬಾಂಗ್ಲಾ ನುಸುಳುಕೋರರಿಗೆ ಏಜೆಂಟರ ಸಹಕಾರವಿದೆ. ಬಾಂಗ್ಲಾದಿಂದ ಭಾರತಕ್ಕೆ ನುಸುಳಿ ಬಂದ ಬಳಿಕ ಕೇಳಿದಷ್ಟು ಹಣ ಕೊಟ್ಟರೆ ಅಂಥವರಿಗೆ ಅಕ್ರಮವಾಗಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಗಳನ್ನು ಏಜೆಂಟರು ಮಾಡಿಸಿಕೊಡುತ್ತಾರೆ. ಕೆಲವರು ಯಾವ ಗುರುತಿನ ಚೀಟಿಯೂ ಇಲ್ಲದೆ ವಾಸವಾಗಿದ್ದಾರೆ ಎನ್ನಲಾಗಿದೆ. ಭಾಷೆಯ ಆಧಾರದಲ್ಲಿ ಮೂಲ ಬಾಂಗ್ಲನ್ನರನ್ನು ಗುರುತಿಸಬಹುದು. ಆದರೆ, ಕ್ರಮೇಣ ಅವರು ಸ್ಥಳೀಯರಂತೆಯೇ ಮಾತನಾಡುವುದನ್ನು ರೂಢಿಸಿಕೊಂಡು, ಉತ್ತರ ಭಾರತ ಮೂಲದವರು ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ, ಹತ್ತಾರು ವರ್ಷದಿಂದ ಒಂದು ಪ್ರದೇಶದಲ್ಲಿ ವಾಸವಿರುವವರನ್ನು ಬಾಂಗ್ಲಾ ಮೂಲದವರೆಂದು ಪತ್ತೆ ಮಾಡುವುದು ಸವಾಲಾಗುತ್ತಿದೆ.

ಸ್ಥಳೀಯರ ಬೆಂಬಲ ?: 2019ರ ಜನವರಿ 22ರಂದು ಇಲ್ಲಿನ ರಾಜನಗರದ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಮನೆಗೆ ನುಗ್ಗಿ ಹತ್ಯೆಗೈದು, ದರೋಡೆ ಮಾಡಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಬಾಂಗ್ಲಾದವನು. ಆತನಿಗೆ ಸ್ಥಳೀಯರ ಸಹಕಾರ ಇತ್ತೇ ಎಂಬುದು ಗೊತ್ತಾಗಬೇಕಿದೆ. ಕೆಲ ಸ್ಥಳೀಯರು ಅಕ್ರಮ ಬಾಂಗ್ಲಾ ನುಸುಳುಕೋರರ ಬೆಂಬಲಕ್ಕೆ ನಿಂತಿರುವ ಸಂಶಯವಿದೆ.

ಅಕ್ರಮ ಬಾಂಗ್ಲಾದೇಶಿಯರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಹು-ಧಾ ಅವಳಿ ನಗರದಲ್ಲಿ ಬಾಂಗ್ಲಾ ವಲಸಿಗರು ಕಂಡು ಬಂದಲ್ಲಿ ಸಾರ್ವಜನಿಕರು ನಮಗೆ ಮಾಹಿತಿ ನೀಡಿದರೆ ಕೂಲಂಕಷ ಪರಿಶೀಲನೆ ನಡೆಸಲು ಅನುಕೂಲವಾಗುತ್ತದೆ. | ಆರ್. ದಿಲೀಪ ಹು-ಧಾ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net