

ದೇವರಾಜ್ ಎಲ್. ಬೆಂಗಳೂರು: ಕರೊನಾ ಮಧ್ಯೆಯೂ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಸಿಇಟಿ, ನೀಟ್, ಕೆ-ಸೆಟ್ ಪರೀಕ್ಷೆಗಳ ದಿನಾಂಕಗಳು ನಿಗದಿಯಾಗಿದೆ. ಪದವಿ ಪರೀಕ್ಷೆಗಳು ಸೇರಿ ಪ್ರಮುಖ ಪರೀಕ್ಷೆಗಳನ್ನು ಜೂ. 2ನೇ ವಾರದಿಂದ ಜುಲೈ 3 ವಾರದೊಳಗೆ ನಡೆಸಲು ನಿರ್ಧರಿಸಲಾಗಿದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುವ ನಿರೀಕ್ಷೆಯಲಿರುವ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಗಾಗಿ ಮತ್ತಷ್ಟು ತಿಂಗಳು ಕಾಯುವುದು ಅನಿವಾರ್ಯವಾಗಿದೆ.
ಸದ್ಯದ ಪರಿಸ್ಥಿತಿ ನೋಡಿದರೆ ಯಾವಾಗ ಪ್ರವೇಶ ಪ್ರಕ್ರಿಯೆ ನಡೆಸಬೇಕೆಂಬ ಗೊಂದಲ ಇದೆ. ಸಾರಿಗೆ ಸಂಪರ್ಕ ಕಲ್ಪಿಸುವವರೆಗೂ ಪ್ರಕ್ರಿಯೆಗೆ ಆರಂಭಿಸಲು ಸಾಧ್ಯವಿಲ್ಲ. |ಡಾ.ಜೆ.ಟಿ. ದೇವರಾಜ್ ಬೆಂ.ವಿವಿ ಮೌಲ್ಯಮಾಪನ ಕುಲಸಚಿವ
ಲಾಕ್ಡೌನ್ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬೇಕು. ಆಗ ಒಂದು ವೇಳೆ ಪ್ರವೇಶ ಪ್ರಕ್ರಿಯೆ ಆರಂಭಿಸಿದರೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ದೂರದ ರಾಜ್ಯಗಳಲ್ಲಿರುವ ಅಭ್ಯರ್ಥಿಗಳಿಗೆ ಭಾಗವಹಿಸಲು ಅಸಾಧ್ಯವಾಗುತ್ತದೆ. ಇದು ಮುದೊಂದು ದಿನ ವಿವಾದಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಸದ್ಯ ಪ್ರಕ್ರಿಯೆ ನಡೆಸುವುದು ಬೇಡ ಎಂದು ವಿವಿ ತೀರ್ವನಿಸಿದೆ. ವಿಳಂಬವೇ ಸರಿಯಲ್ಲ: ಬೆಂ.ವಿವಿ ಕಳೆದ 3 ವರ್ಷಗಳಿಂದ ಪಿಎಚ್.ಡಿಗೆ ಅರ್ಜಿಯನ್ನೇ ಆಹ್ವಾನಿಸಿರಲಿಲ್ಲ. 2019ರ ಜೂನ್ನಲ್ಲಿ ಅರ್ಜಿ ಆಹ್ವಾನಿಸಿದ್ದರೂ ಹಲವು ಕಾರಣಗಳಿಂದ ಪ್ರಕ್ರಿಯೆ ವಿಳಂಬ ಮಾಡುತ್ತಲೇ ಬಂದಿದೆ. ಪಿಎಚ್.ಡಿ ಅಧ್ಯಯನಕ್ಕಾಗಿ ಬೇರೆ ಕೆಲಸಗಳನ್ನು ಬಿಟ್ಟು ವ್ಯಾಸಂಗ ಮಾಡಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇನೆ. ಕೌನ್ಸೆಲಿಂಗ್ ನಡೆಸಿದರೆ ಸೀಟು ದೊರೆಯುತ್ತದೆಯೋ ಇಲ್ಲವೋ ತಿಳಿಯತ್ತದೆ. ಸಿಕ್ಕರೆ ಅಧ್ಯಯನ ನಡೆಸುತ್ತೇನೆ. ಇಲ್ಲದಿದ್ದರೆ ಮತ್ತೆ ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ಆದರೆ, ಈ ರೀತಿ ವಿಳಂಬ ಮಾಡುವುದು ಸರಿಯಲ್ಲ ಎಂದು ಅಭ್ಯರ್ಥಿ ಅಂಬಿಕಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೌನ್ಸೆಲಿಂಗ್ಗೆ ಚಾಲನೆ ನೀಡಬಹುದು. ವಿಳಂಬ ಮಾಡುತ್ತಾ ಕಾಲಹರಣ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. |ಕಿಶೋರ್ ಅರ್ಹ ಪಿಎಚ್.ಡಿ ಅಭ್ಯರ್ಥಿ
ಪಿಎಚ್.ಡಿ ಪರೀಕ್ಷೆ: ಬೆಂ.ವಿವಿ ಪಿಎಚ್.ಡಿ ಪ್ರವೇಶ ಪರೀಕ್ಷೆ 2019ರ ಡಿ.29ರಂದು ನಗರದ 5 ಪ್ರಮುಖ ಕಾಲೇಜಿನಲ್ಲಿ ನಡೆದಿತ್ತು. 2,058 ಅಭ್ಯರ್ಥಿಗಳು ಹಾಜರಾಗಿದ್ದರು. ವಿವಿ ಪಿಎಚ್.ಡಿಗೆ ಅಧಿಸೂಚನೆ ಹೊರಡಿಸಿದಾಗ 37 ವಿಷಯಗಳಿಂದ 482 ಸೀಟುಗಳು ಲಭ್ಯವಿದ್ದವು. ಆದರೆ, ಇದೀಗ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಮಾರ್ಗದರ್ಶಕರಿಗೆ ಸಲ್ಲಿಕೆ ಮಾಡಿದ್ದು, ಸೀಟುಗಳ ಪ್ರಮಾಣ 650ಕ್ಕೆ ಏರಿಕೆಯಾಗಲಿದೆ. ಅಂದಾಜು 150ಕ್ಕೂ ಹೆಚ್ಚಿನ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಸದ್ಯ ಎಲ್ಲ ವಿಭಾಗಗಳಿಂದ ಖಾಲಿ ಇರುವ ಸೀಟುಗಳ ಮಾಹಿತಿಯನ್ನು ಪಡೆಯುತ್ತಿದ್ದು, ಇದರ ಸಂಪೂರ್ಣ ಮಾಹಿತಿ ಸಿಕ್ಕ ಬಳಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. 2016ರಲ್ಲಿ ಬೆಂ.ವಿವಿ ಪಿಎಚ್.ಡಿಗೆ ಅರ್ಜಿ ಆಹ್ವಾನಿಸಿದಾಗ 1,800 ಅರ್ಜಿಗಳು ಸಲ್ಲಿಕೆಯಾಗಿದ್ದವು. 2019ರಲ್ಲಿ ಇದರ ಪ್ರಮಾಣ ದುಪ್ಪಟ್ಟುಗೊಂಡಿದೆ.
ಕೌನ್ಸೆಲಿಂಗ್ ಏಕೆ ಸಾಧ್ಯವಿಲ್ಲ?: ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸುವ ಪರೀಕ್ಷೆಗಳನ್ನೇ ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದರಿಂದ ಕೇವಲ 3-4 ಸಾವಿರ ಅಭ್ಯರ್ಥಿಗಳು ಭಾಗವಹಿಸಲಿರುವ ಪಿಎಚ್.ಡಿ ಕೌನ್ಸೆಲಿಂಗ್ ನಡೆಸಲು ಏಕೆ ಸಾಧ್ಯವಿಲ್ಲ ಎಂದು ಕೌನ್ಸೆಲಿಂಗ್ಗೆ ಅರ್ಹರಾಗಿರುವ ಅಭ್ಯರ್ಥಿಗಳು ಬೆಂ.ವಿವಿಯನ್ನು ಪ್ರಶ್ನಿಸಿದ್ದಾರೆ.