

ಕೋಲಾರ: ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿ 9 ಕಡೆ ವಿವಿಧ ಸಂದರ್ಭಗಳಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಬಳಿಯ ಇಲಿಯಾಸ್ ನಗರದ ನಿವಾಸಿ ಸೈಯದ್ ಅಫ್ಸರ್ (37) ಬಂಧಿತ. ಆರೋಪಿಯಿಂದ 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಳಬಾಗಿಲು ನಗರದ ಮಂಜುನಾಥ್ ಕಾಲನಿಯ ಸೋಮಶೇಖರಪ್ಪ ಎಂಬುವರ ನಿವಾಸದಲ್ಲಿ ಏ.4ರಂದು ಯಾರೂ ಇಲ್ಲದಾಗ ಮನೆ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂದ ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸೈಯದ್ ಅಫ್ಸರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮುಳಬಾಗಿಲು ನಗರದಲ್ಲಿ 7, ನಂಗಲಿಯಲ್ಲಿ 1 ಕಡೆ ಹಾಗೂ ಕೋಲಾರ ಗ್ರಾಮಾಂತರದಲ್ಲಿ 1 ಕಡೆ ಸೇರಿ ಒಟ್ಟು 9 ಕಡೆ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಎಚ್.ಸಿ.ಜಗದೀಶ್, ಮುಳಬಾಗಿಲು ಉಪವಿಭಾಗದ ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ಮುಳಬಾಗಿಲು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜಣ್ಣ, ಪಿಎಸ್ಐ ಅಣ್ಣಯ್ಯ, ಸಿಬ್ಬಂದಿ ಪ್ರಭು, ಆಂಜಿನಪ್ಪ, ರಾಘವೇಂದ್ರ, ಚನ್ನಪ್ಪ, ಮಧು, ವೆಂಕಟರಾಘವನ್, ಸುಬ್ರಹ್ಮಣಿ, ಸತೀಶ್ ಬಾಬು, ಕೆ.ಸತೀಶ್, ವಿಶ್ವನಾಥ್, ಪ್ರಶಾಂತ್, ನವೀನ್, ತಾಂತ್ರಿಕ ವಿಭಾಗದ ಮುರಳಿ ಹಾಗೂ ಶ್ರೀನಾಥ್ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ವಿಶೇಷ ತಂಡದ ಕಾರ್ಯಾಚರಣೆಯನ್ನು ಎಸ್ಪಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.
ಚಿನ್ನ, 6 ಬೈಕ್ ವಶ
ಮುಳಬಾಗಿಲು: ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಸಮೀಪದ ಬೈರಕೂರು ಗ್ರಾಮದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಿಲು ತಾಲೂಕು ಎನ್.ಕುರಬರಹಳ್ಳಿಯ ಹರೀಶ್ (34) ಬಂಧಿತ. ಆರೋಪಿಯಿಂದ 1.25 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 2.50 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಗ್ರಾಮದ ಸೀತರಾಂ ಎಂಬುವರ ಮನೆ ಬಾಗಿಲು ಒಡೆದು ಒಳ ನುಗ್ಗಿ ಬೀರುವಿನಲ್ಲಿದ್ದ ಒಂದು ಚಿನ್ನದ ಸರ, 33 ಚಿನ್ನದ ಗುಂಡುಗಳನ್ನು ಕಳವು ಮಾಡಿದ್ದ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆ 6 ದ್ವಿಚಕ್ರ ವಾಹನ ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.