

ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ರಾಜಧಾನಿಯಲ್ಲಿ ವಶಪಡಿಸಿಕೊಂಡಿದ್ದ ವಾಹನಗಳನ್ನು ಪೊಲೀಸರು ಶುಕ್ರವಾರದಿಂದ ಮರಳಿಸುವ ಪ್ರಕ್ರಿಯೆ ನಡೆಸಲಿದ್ದಾರೆ.
ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳ ಸೇವೆಯಲ್ಲಿ ತೊಡಗಿರುವವರಿಗೆ ಪಾಸ್ ನೀಡಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಆದರೆ, ಪಾಸ್ ಇಲ್ಲದೇ ಹಾಗೂ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬೆಂಗಳೂರು ಒಂದರಲ್ಲೇ 50,000ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಲಾಕ್ಡೌನ್ ಅವಧಿ ಮುಗಿದ ಬಳಿಕ ಈ ವಾಹನಗಳನ್ನು ಮಾಲೀಕರಿಗೆ ಮರಳಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮೇ 1ರಿಂದಲೇ ವಾಹನಗಳನ್ನು ಮಾಲೀಕರಿಗೆ ಒಪ್ಪಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಾಹನಗಳನ್ನು ಪೊಲೀಸರ ವಶದಿಂದ ಮರಳಿ ಪಡೆಯಬಹುದು. ವಾಹನಗಳನ್ನು ಮರಳಿಸಲು ಸಿಎಂ ಹಾಗೂ ಗೃಹಸಚಿವರು ಅನುಮತಿ ನೀಡಿದ್ದಾರೆ ಎಂದು ರಾವ್ ಹೇಳಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯಾ ಪೊಲೀಸ್ ಆಯುಕ್ತರು ಹಾಗೂ ವರಿಷ್ಠಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ದಾಖಲೆಗಳಿಲ್ಲದ ವಾಹನಗಳದ್ದೇ ಚಿಂತೆ: ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳ ಪೈಕಿ ದಾಖಲೆಗಳಿಲ್ಲದ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇವನ್ನು ಇನ್ನಷ್ಟು ದಿನಗಳವರೆಗೆ ಪೊಲೀಸರೇ ಕಾಯಬೇಕಾಗಿದೆ. ಹಲವು ಕಳವು ಪ್ರಕರಣಗಳು ಕೂಡ ಬಯಲಾಗಬಹುದು.