ಬೆಂಗಳೂರು ಅಭಿವೃದ್ಧಿಗೆ 1000 ಕೋಟಿ; ಬಿಡುಗಡೆ ಮಾಡಲು ವಿರೋಧಪಕ್ಷ ನಾಯಕ ಆರ್.ಅಶೋಕ್ ಒತ್ತಾಯ

Assembly opposition leader R Ashok
Published on

ಬೆಂಗಳೂರು:
ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಕೂಡಲೇ 1,000 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ಮಳೆ ಬರುವ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಅಗತ್ಯ ಕಾಮಗಾರಿಗಳನ್ನು ನಡೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸ್ವಾತಂತ್ರ್ಯ ಉದ್ಯಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆಗಳಲ್ಲಿ ಗುಂಡಿ, ಕಸದ ರಾಶಿ ಎಲ್ಲೆಡೆ ಕಾಣುತ್ತಿದೆ. ಪೌರಕಾರ್ಮಿಕರಿಗೆ ಹಾಗೂ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ. ರಾಜಧಾನಿಯಲ್ಲಿ ಒಂದೇ ಒಂದು ರೂಪಾಯಿ ಕಾಮಗಾರಿ ನಡೆದಿಲ್ಲ ಎಂದು ದೂರಿದರು.
ಬೆಂಗಳೂರಿನ ಜನರು ಈಗ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುತ್ತಿದ್ದಾರೆ. ಬೆಂಗಳೂರು ಜನರು ಅತ್ಯಧಿಕ ತೆರಿಗೆ ಪಾವತಿಸುತ್ತಿದ್ದಾರೆ. ರಾಜ್ಯದ ಒಟ್ಟು ತೆರಿಗೆಯಲ್ಲಿ ಅತಿ ಹೆಚ್ಚು ಪಾಲು ಬೆಂಗಳೂರಿಂದ ಬರುತ್ತದೆ. ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ ಕಾಂಗ್ರೆಸ್ ಸರ್ಕಾರ ಬ್ಯಾಡ್ ಬೆಂಗಳೂರು, ಕ್ರೈ ಬೆಂಗಳೂರು ಹಾಗೂ ಕಸದ ರಾಶಿಯ ಬೆಂಗಳೂರನ್ನು ನೀಡಿದೆ ಎಂದರು.

ಅಧಿಕಾರಿ ಸಾವಿಗೆ ಸರ್ಕಾರ ಕಾರಣ:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವರೇ ಕಾರಣರಾಗಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.
ಲಂಚ ತೆಗೆದುಕೊಂಡಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇಲ್ಲಿ 187 ಕೋಟಿ ರೂ. ಹಗರಣ ನಡೆದಿದ್ದು, ಇದಕ್ಕೆ ಯಾರೆಲ್ಲ ಕಾರಣವೆಂದು ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಕೇವಲ ಸಚಿವರಲ್ಲದೆ, ಮುಖ್ಯಮಂತ್ರಿ ಹಾಗೂ ಇಡೀ ಸಂಪುಟದವರೇ ಲೂಟಿ ಮಾಡಿದ್ದಾರೆ. ಇದಕ್ಕೆ ನೇರವಾಗಿ ಸರ್ಕಾರವೇ ಕಾರಣ ಎಂದರು.
187 ಕೋಟಿ ಲೂಟಿ ಹೊಡೆದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹಿಂದೆ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆ ಕೇಳಿದ ಕಾಂಗ್ರೆಸ್ ಸಚಿವರು ಹಾಗೂ ಮುಖ್ಯಮಂತ್ರಿ ರಾಜೀನಾಮೆ ಕೊಡಲಿ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net