

ಕೆ.ಆರ್.ನಗರ: ಕಾವೇರಿ ನೀರು ಬಿಡುಗಡೆ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ತಾಲೂಕಿನ ರೈತ ಸಂಘ, ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದವು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಭೆ ಸೇರಿದ ತಾಲೂಕು ರೈತ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್, ಜಯ ಕರ್ನಾಟಕ ಸಂಘಟನೆ, ಜಾನಪದ ಪರಿಷತ್, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಖಾಸಗಿ ವಾಹನಗಳ ಸಂಚಾರವಿರಲಿಲ್ಲ. ಪಟ್ಟಣದ ಅಂಗಡಿ ಮುಂಗಟ್ಟುಗಳ ಮಾಲೀಕರು, ಹೋಟೆಲ್ ಮಾಲೀಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಿದರು. ಮಾಂಸದಂಗಡಿಯಲ್ಲಿ ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದನ್ನು ಕಂಡ ಪ್ರತಿಭಟನಾಕಾರರು ಮಾರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಂಗಡಿಗಳನ್ನು ಮುಚ್ಚಿಸಿದರು. ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಜೆಡಿಎಸ್ ಬೆಂಬಲಿತ ಪುರಸಭೆ ಸದಸ್ಯ ಉಮೇಶ್ ನೇತೃತ್ವದಲ್ಲಿ ರೈತಪರ ಸಂಘಟನೆಗಳ ಹೋರಾಟಗಾರರ ಪುರಸಭೆ ಕಚೇರಿಗೆ ನುಗ್ಗಿ ಬಾಗಿಲು ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮುಖ್ಯಾಧಿಕಾರಿ ಡಾ.ಜಯಣ್ಣ ಸರ್ಕಾರಿ ರಜೆ ಘೋಷಿಸದ ಕಾರಣ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬಂದ್‌ಗೆ ನಾವು ಗೌರವ ನೀಡುತ್ತೇವೆ. ಆದರೆ, ಕಚೇರಿ ಮುಚ್ಚಲು ಅವಕಾಶವಿಲ್ಲ ಎಂದರು. ಈ ವೇಳೆ ಪುರಸಭೆ ಸದಸ್ಯ ಕೋಳಿ ಪ್ರಕಾಶ್ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸುವಂತಿಲ್ಲ. ಸಿಬ್ಬಂದಿಗೆ ತೊಂದರೆ ನೀಡಬೇಡಿ, ಹೊರಗೆ ನಡೆಯಿರಿ ಎಂದರು. ಈ ವೇಳೆ ಉಮೇಶ್ ಮತ್ತು ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಇಬ್ಬರನ್ನು ಸಮಾಧಾನಪಡಿಸಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕದ ಅಧ್ಯಕ್ಷ ಫಯಾಜ್ ಪಾಷ, ಜಿಲ್ಲಾಧ್ಯಕ್ಷ ಎಂ.ಎನ್.ನಾಗೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಾಲೂಕು ಅಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜು, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭದ ಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್, ಜಿಲ್ಲಾ ಗೌರವ ಕೋಶಾಧ್ಯಕ್ಷ ಜಿ.ಪ್ರಕಾಶ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಅನಿಲ್‌ಗೌಡ, ವಕೀಲ ಜಿ.ಆರ್.ರಾಮೇಗೌಡ, ಮುಖಂಡರಾದ ರಾಮ್‌ಪ್ರಸಾದ್, ಸಾ.ರಾ.ನಾಗೇಶ್, ಇಮ್ತಿಯಾಜ್ ಪಾಷಾ ಪಾಲ್ಗೊಂಡಿದ್ದರು.