

ಮಾಗಡಿ: ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಣ್ಣೂರು ಮಠದ ಶ್ರೀಗಳು ಷರತ್ತುಬದ್ಧ ಜಾಮೀನು ಮೇಲೆ ಬುಧವಾರ ಜೈಲಿನಿಂದ ಹೊರಬಂದರು.
ರಾಮನಗರ ಜಿಲ್ಲಾ ಕಾರಾಗೃಹದಿಂದ ಕಣ್ಣೂರು ಮಕ್ಕಳ ದೇವರ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಹೊರಬರುತ್ತಿದ್ದಂತೆ ಭಕ್ತರು ಸೇಬಿನ ಹಾರ, ಗುಲಾಬಿ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು.
2022ರ ಅ.24ರಂದು ರಾಮನಗರ ಜಿಲ್ಲೆಯ ಪುರಾತನ ಮಠಗಳಲ್ಲಿ ಒಂದಾದ ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಸ್ಥಳದಲ್ಲಿ ಸಿಕ್ಕ ಡೆತ್ನೋಟ್ ಹಲವು ತಿರುವು ನೀಡಿತ್ತು. ಈ ಪ್ರಕರಣದಲ್ಲಿ ಕಣ್ಣೂರು ಮಠದ ಶ್ರೀಗಳು, ನಿಲಾಂಬಿಕೆ, ವಕೀಲ ಮಹದೇವಯ್ಯ ಅವರನ್ನ ಪೊಲೀಸರು ಬಂಧಿಸಿದ್ದರು.
ಕಣ್ಣೂರು ಮಠದ ಶ್ರೀಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜ.13ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.