

ಲಂಡನ್: ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ 20 ವರ್ಷದ ಯುವತಿ ಬನಾಜ್ ಮಹ್ಮೂದ್, ತಮ್ಮ ಮನೆಯವರಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಹತ್ಯೆಯಾದ ಘಟನೆ ಮನಕಲಕುವಂತಿದೆ.
ಬನಾಜ್ ಮಹ್ಮೂದ್ ಮೃತದೇಹವನ್ನು ಆಕೆಯ ಮನೆಯ ಆವರಣದ ಗಾರ್ಡನ್ನಲ್ಲಿ ಸೂಟ್ಕೇಸ್ನಲ್ಲಿ ಹಾಕಿ ಸಮಾಧಿ ಮಾಡಲಾಗಿತ್ತು. ಮೂರು ತಿಂಗಳ ನಂತರ ಕೊನೆಗೂ ಆಕೆಯ ಮೃತದೇಹ ಪತ್ತೆಯಾಗಿದ್ದು, ಕರಾಳ ಘಟನೆಯು ಬಯಲಿಗೆ ಬಂದಿದೆ.
ಅಂದಹಾಗೆ ಬನಾಜ್, ಮರ್ಯಾದೆ ಹತ್ಯೆಯ ಬಲಿಪಶುವಾಗಿದ್ದು, ಆಕೆಯ ದುರಂತ ಕತೆ ಮರ್ಯಾದೆ ಹತ್ಯೆ ಆಧಾರಿತ ಕೀಲಿ ಹ್ಯಾವ್ಸ್ ನಟನೆಯ ಐಟಿವಿ ಹಾನರ್ ಡ್ರಾಮಾದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಕೀಲಿ ಹ್ಯಾವ್ಸ್ ಬನಾಜ್ ಹತ್ಯೆಯ ತನಿಖಾಧಿಕಾರಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಕರೊಲಿನ್ ಗೂಡೆ ಪಾತ್ರವನ್ನು ನಿಭಾಯಿಸಿದ್ದಾರೆ.
ಬನಾಜ್ ಕತೆಗೆ ಬರುವುದಾದರೆ, ಆಕೆಯ ತಂದೆ ಮಹ್ಮೂದ್ ಬಾಬಾಕಿರ್ ಮಹ್ಮೂದ್ಗೆ ಕೊಲೆ ಅಪರಾಧದಡಿಯಲ್ಲಿ 20 ವರ್ಷ, ಆಕೆಯ ಅಂಕಲ್ಗೆ 23 ವರ್ಷ ಮತ್ತು ಬನಾಜ್ ಕೊಲೆ ಮಾಡಿದ್ದಲ್ಲದೆ, ಎರಡು ಗಂಟೆಗಳು ಕಾಲ ಕಿರುಕುಳ ನೀಡಿ ಅತ್ಯಾಚಾರ ಮಾಡಿದ ಅಪರಾಧದಡಿಯಲ್ಲಿ ಮೊಹಮದ್ ಮರೀದ್ ಹಮಾ ಎಂಬಾತನಿಗೆ 17 ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಆರೋಪಿಗಳಾದ ಮೊಹಮ್ಮದ್ ಸಲೇಹ್ ಅಲಿ ಮತ್ತು ಒಮರ್ ಹುಸೇನ್ ಇಬ್ಬರಿಗೂ ಕ್ರಮವಾಗಿ 20 ಮತ್ತು 21 ವರ್ಷ ಶಿಕ್ಷೆಯನ್ನು ನೀಡಲಾಗಿದೆ.
ಅಂದಹಾಗೆ ಬನಾಜ್ ಸಾಂಪ್ರದಾಯಿಕ ಇರಾಕ್ನ ಕುರ್ದಿಶ್ ಕುಟುಂಬಕ್ಕೆ ಸೇರಿದ್ದಳು. ಆಕೆ 10 ವರ್ಷದವಳಿದಾಗಲೇ ಕುಟುಂಬ ದಕ್ಷಿಣ ಲಂಡನ್ಗೆ ಬಂದು ನೆಲೆಸಿತ್ತು. ಬಲವಂತದ ಮದುವೆ ಮಾಡಲು ನಿರ್ಧರಿಸಿದ್ದಕ್ಕೆ ಬನಾಜ್ ಸಹೋದರಿ ಬೆಖಲ್ 2002ರಲ್ಲಿ ಮನೆಯಿಂದ ಪರಾರಿಯಾಗಿದ್ದಳು. ಬಳಿಕ ಬೆಖಲ್ ಫಾಸ್ಟರ್ ಕೇರ್ನಲ್ಲಿ ವಾಸವಿದ್ದಳು. ಹೀಗಿದ್ದರೂ ಆಕೆಯ ಕುಟುಂಬ ನಿರಂತರ ಬೆದರಿಕೆ ಹಾಕುತ್ತಿತ್ತು ಎಂದು ಐಟಿವಿ ಹಾನರ್ ಡ್ರಾಮಾದಲ್ಲಿ ವಿವರಿಸಲಾಗಿದೆ.
ಬೆಖಲ್ ಕೆಲವೊಮ್ಮೆ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುತ್ತಿದ್ದಿದ್ದು ಮತ್ತು ಕೇಶ ವಿನ್ಯಾಸ ಮಾಡಿಕೊಳ್ಳುತ್ತಿದ್ದಿದ್ದು ಕುಟುಂಬಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ಆಕೆಯ ತಂದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಮನೆಯಿಂದ ಹೊರ ಹೋಗಬೇಕಾದರೂ ಮೈತುಂಬ ಬಟ್ಟೆ ಹಾಕಿಕೊಂಡ ಹೋಗಬೇಕಾಗಿತ್ತು. ಆದರೆ, ಇದ್ಯಾವುದು ಬೆಖಲ್ಗೆ ಇಷ್ಟವಿರಲಿಲ್ಲ. ಹೀಗೆ ನಿರಂತರವಾಗಿ ಅಡ್ಡಿಪಡಿಸಲಾಗಿತ್ತು. ಹೀಗಿರುವಾಗ ಬೆಖಲ್ಗೆ ತನಗಿಂತ 15 ವರ್ಷ ಹಿರಿಯ ವ್ಯಕ್ತಿಯ ಜತೆ ಬಲವಂತವಾಗಿ ಮದುವೆ ನಿಶ್ಚಯ ಮಾಡಲಾಗಿತ್ತು. ಆ ವೇಳೆ ಬೆಖಲ್ ಕೇವಲ 16 ವರ್ಷ ವಯಸ್ಸಾಗಿತ್ತು. ಹೀಗಾಗಿಯೇ ಆಕೆ ಮನೆ ಬಿಟ್ಟು ಹೋಗಿದ್ದಳು.
ಬನಾಜ್ ಮಾತ್ರ ಆಗಿನ್ನೂ ಚಿಕ್ಕವಳಾಗಿದ್ದಳು. ಅವಳಿಗೂ ಸಹ 10 ವರ್ಷ ಹಿರಿಯ ವ್ಯಕ್ತಿಯ ಜತೆ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಮದುವೆಯು ಆಯಿತು. ಇದರ ನಡುವೆ ಗಂಡನಿಂದಲೇ ಅತ್ಯಾಚಾರ ನಡೆದಿದೆ ಮತ್ತು ದೈಹಿಕ ಹಲ್ಲೆ ಮಾಡಿದ್ದಾನೆಂದು ಬನಾಜ್ ಕುಟುಂಬಕ್ಕೆ ತನ್ನ ನೋವನ್ನು ಹೇಳಿಕೊಂಡಿದ್ದಳು. ಆದರೆ, ಕುಟುಂಬ ಅದಕ್ಕೆ ಕಿವಿಗೊಟ್ಟಿರಲಿಲ್ಲ. ಹೊಂದಾಣಿಕೆ ಮಾಡಿಕೊಳ್ಳುವಂತೆ ಹೇಳಿದ್ದರು. ಒಮ್ಮೆ ಕ್ರೂರವಾಗಿ ಹಲ್ಲೆ ಮಾಡಿದ್ದ ಗಂಡ, ನಾನು ನಿಮ್ಮ ಮಗಳಿಗೆ ಹಲ್ಲೆ ಮಾಡಿದೆ. ಏಕೆಂದರೆ ನನಗೆ ಗೌರವ ನೀಡುವುದಿಲ್ಲ ಮತ್ತು ಲೈಂಗಿಕ ಕ್ರಿಯೆಗೆ ಒಪ್ಪದಿದ್ದಾಗ ನಾನು ಬಲವಂತ ಮಾಡಬೇಕಾಯಿತು ಎಂದು ಬನಾಜ್ ಪತಿ ಹೇಳಿಕೊಂಡಿದ್ದ. ಆದರೆ, ಬನಾಜ್ ನೆರವಿಗೆ ಕುಟುಂಬದ ಯಾರೊಬ್ಬರು ಬರಲೇ ಇಲ್ಲ.
ನಿರಂತರ ಕಿರುಕುಳದಿಂದ ಬೇಸತ್ತಿದ್ದ ಬನಾಜ್ ಮದುವೆಯಾದ ಎರಡೇ ವರ್ಷದಲ್ಲಿ ಮನೆ ಬಿಟ್ಟು 2005ರಲ್ಲಿ ಮತ್ತೆ ಮನೆ ಸೇರಿದ್ದಳು. ಇದರ ನಡುವೆ ಬನಾಜ್ ತನಗೆ ಇಷ್ಟವಾದ ರೆಹಮತ್ ಸುಲೆಮಾನ್ ಎಂಬಾತನ ಜತೆ ಸಂಬಂಧ ಬೆಳೆಸಿದ್ದಳು. ಇದು ಕುಟುಂಬದವರ ಗಮನಕ್ಕೆ ಬಂದಿತ್ತು. ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ದೂರವಿರುವಂತೆ ಹೇಳಿದ್ದರು. ಆದರೂ ಬನಾಜ್ ಸಂಬಂಧ ಮುಂದುವರಿಸಿದ್ದಳು.
ಹೀಗಿರುವಾಗ ಕಳೆದ ಡಿಸೆಂಬರ್ನಲ್ಲಿ ಬನಾಜ್ ಜತೆ ರೆಹಮಾತ್ನನ್ನು ಕೊಲೆ ಮಾಡಲು ಕುಟುಂಬ ನಿರ್ಧಿರಿಸಿತ್ತು. ಇದು ಬನಾಜ್ ಗಮನಕ್ಕೂ ಬಂದು ನನಗೂ ನನ್ನ ಬಾಯ್ಫ್ರೆಂಡ್ಗೂ ಜೀವ ಬೆದರಿಕೆ ಇದೆ ಎಂದು ಡಿಸೆಂಬರ್ 12ರಂದು ವಿಂಬಲ್ಡನ್ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಳು.
ಇದರ ಬೆನ್ನಲ್ಲೇ ಬನಾಬ್ ಭೇಟಿ ಮಾಡಿದ ಆಕೆಯ ತಂದೆ ಮಹ್ಮೂದ್ ನಿನಗೇನು ಆಗುವುದಿಲ್ಲ ನಮ್ಮೊಂದಿಗೆ ಬಂದುಬಿಡು ಎಂದು ನಂಬಿಸಿ ಮನೆಗೆ ಕರೆದೊಯ್ದಿದ್ದರು. ಐದು ವಾರಗಳ ಬಳಿಕ ಸುಮ್ಮನಿದ್ದರು. ಅದಾದ ಬಳಿಕ ಬನಾಜ್ಳನ್ನು ರೇಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಸೂಟ್ಕೇಸ್ನಲ್ಲಿ ಹಾಕಿ ಮನೆಯ ಗಾರ್ಡನ್ನಲ್ಲಿ ಸಮಾಧಿ ಮಾಡಿದ್ದಾರೆ. ಬನಾಜ್ ಕೊಲೆಗೂ ಎರಡು ದಿನಗಳ ಮುನ್ನವೇ ಆಕೆಯ ಬಾಯ್ಫ್ರೆಂಡ್ ಅನ್ನು ಅಪಹರಿಸಿ ಚಿತ್ರಹಿಂಸ ನೀಡಿದ್ದರು ಎಂಬುದು ತಿಳಿದುಬಂದಿದೆ. ಕೊನೆಗೂ ಕುಟುಂಬದವರು ತಮ್ಮ ತಪ್ಪೊಪ್ಪಿಕೊಂಡಿದ್ದು, ಎಲ್ಲರಿಗೂ ಜೈಲು ಶಿಕ್ಷೆಯಾಗಿದೆ. (ಏಜೆನ್ಸೀಸ್)