ಬನಶಂಕರಿ ಅಮ್ಮನ ಪೂಜಾ ಮಹೋತ್ಸವ ಸಂಪನ್ನ

17ss2 meravanige
ಗೋಪಾಲಪುರ ಬನಶಂಕರಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಅಮ್ಮನವರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಯಿತು.
Published on

ಶನಿವಾರಸಂತೆ: ಗೋಪಾಲಪುರ ಗ್ರಾಮದ ಬನಶಂಕರಿ ಅಮ್ಮನವರ 27ನೇ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಬುಧವಾರ ತೆರೆಬಿದ್ದಿತು.

ಎರಡು ದಿನ ನಡೆದ ವಾರ್ಷಿಕ ಮಹೋತ್ಸವದಲ್ಲಿ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಶ್ರೀಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳಿಂದ ಅಭಿಷೇಕ ಮಾಡಲಾಯಿತು. ಗಣಪತಿ ಹೋಮ, ಪುಣ್ಯಾಹ, ಋತ್ವಿಕ್‌ವರ್ಣ, ಕಲಶಾರಾಧನೆ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ ಹಾಗೂ ಮೃತ್ಯುಂಜಯ ಹೋಮ ಕಾರ್ಯವನ್ನು ನೆರವೇರಿಸಲಾಯಿತು. ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿಯ ನಂತರ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಮಂಗಳವಾದ್ಯ, ವೀರಗಾಸೆ ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಂಜೆ 6.30 ಕ್ಕೆ ಅಮ್ಮನವರಿಗೆ ಲಲಿತಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಲಾಯಿತು ಸಂಜೆ 7.30 ಮಹಾಮಂಗಳಾರತಿ ಕಾರ್ಯದ ನಂತರ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು. ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬುಧವಾರ ಬೆಳಗ್ಗೆ ಮ್ಮನವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಗಂಗಾಸ್ನಾನಕ್ಕೆ ಪಂಚಕಲಶದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬೆಳಗ್ಗೆ ಕೊಂಡೋತ್ಸ ನಡೆಯಿತು. ಬೆಳಗ್ಗೆ ದೇವಾಲಯದ ಪ್ರವೇಶದ ನಂತರ ಅಮ್ಮನವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಮತ್ತು ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗದೊಂದಿಗೆ ಬನಶಂಕರಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಪ್ರಧಾನ ಅರ್ಚಕ ಪ್ರಸನ್ನ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net