

ಮಂಡ್ಯ: ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ, ಪ್ರವಾಹದ ಸನ್ನಿವೇಶ ಉಂಟಾಗಿದೆ. ಈ ಕಾರಣದಿಂದಾಗಿ ಎರಡು ದಿನಗಳವರೆಗೆ ಮಂಡ್ಯ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.
ಕಾವೇರಿ ಕಣಿವೆಯಲ್ಲಿ ಜೋರು ಮಳೆ ಹಿನ್ನೆಲೆಯಲ್ಲಿ ಆ.1 ಮತ್ತು 2ರಂದು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನದಿಗೆ 1,70 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಈ ಭಾಗಗಳಿಗೆ ಜನ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಕಂಡು ಬಂದಿದೆ. ಅದರಲ್ಲೂ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು, ಸೆಲ್ಪಿಗೆ ಮುಂದಾಗುವುದು, ರೀಲ್ಸ್ಗೋಸ್ಕರ ಕೆಳಕ್ಕೆ ಇಳಿಯುವುದೂ ಕಂಡು ಬಂದಿದೆ. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದೆ. ಈ ಭಾಗದಲ್ಲಿ ಈಗಾಗಲೇ ಪೊಲೀಸ್ ಗಸ್ತನ್ನು ಕೂಡ ಹಾಕಲಾಗಿದೆ. ಆದರೂ ಪ್ರವಾಸಿಗರು ಅನಾಹುತಕ್ಕೆ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ಮಂಡ್ಯ ಜಿಲ್ಲಾಡಳಿತ ಈ ಪ್ರವಾಸಿ ತಾಣಗಳಿಗೆ ಆ.1 ಮತ್ತು 2ರವರೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದ ಕೆಆರ್ಎಸ್ ಜಲಾಶಯ, ಬೃಂದಾವನ, ಕಾವೇರಿ ನದಿ ಹರಿಯುವ ಅಕ್ಕಪಕ್ಕ, ಪಶ್ಚಿಮವಾಹಿನಿ, ಘೋಷಾಯ್ಘಾಟ್, ಬಲಮುರಿ ಎಡಮುರಿ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಸ್ಥಾನದಲ್ಲಿರುವ ಸ್ನಾನಘಟ್ಟ ಹಾಗೂ ರಂಗನತಿಟ್ಟಿಗೆ ಪ್ರವೇಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಇರುವುದರಿಂದ ಈಗಾಗಲೇ ತರೀಕೆರೆ ತಾಲ್ಲೂಕಿನ ಕಲ್ಲತ್ತಗಿರಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿ ಸಹಿತ ಪ್ರಮುಖ ಬೆಟ್ಟಗಳಿಗೆ ತೆರಳದಂತೆ ನಿಷೇಧವನ್ನೂ ಜಾರಿಗೊಳಿಸಲಾಗಿದೆ.