ಸಂಕಷ್ಟ ಕಾಲದಲ್ಲೂ ರೈತರ ಮೇಲೆ ಬಮುಲ್ ಗದಾಪ್ರಹಾರ : ಖರೀದಿ ದರ ಕಡಿತಗೊಳಿಸಿರುವುದನ್ನು ಹಿಂಪಡೆಯದಿದ್ದರೆ ಹೋರಾಟ

03-06-rama-raitha
Published on

ರಾಮನಗರ : ಸಂಕಷ್ಟ ಕಾಲದಲ್ಲೂ ಬಮುಲ್ ರೈತರ ಮೇಲೆ ಗದಾ ಪ್ರಹಾರ ಮಾಡಲು ಹೊರಟಿದ್ದು, ಕೂಡಲೇ ಖರೀದಿ ದರ ಕಡಿತವನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಪಿ.ಚಂದ್ರಶೇಖರ್ ಎಚ್ಚರಿಸಿದರು.

ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಕಷ್ಟದ ನಡುವೆ ಹಸುಗಳನ್ನು ಸಾಕಿ ಹಾಲು ಕರೆಯುತ್ತಾರೆ. ಲೀಟರ್ ಹಾಲು ಉತ್ಪಾದನೆಗೆ ಎಷ್ಟು ವೆಚ್ಚವಾಗುತ್ತಿದೆ ಎಂಬುದು ಬಮುಲ್‌ಗೂ ತಿಳಿದಿದೆ. ಆದರೂ ಸಂಕಷ್ಟ ಕಾಲದಲ್ಲಿ ಒಕ್ಕೂಟ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1.50 ರೂ. ಕಡಿತ ಮಾಡುವ ಮೂಲಕ ರೈತರ ಆಧಾಯವನ್ನು ಕಸಿದು ಕೊಂಡಂತಾಗಿದೆ ಎಂದು ಕಿಡಿಕಾರಿದರು. ಹಾಲು ಖರಿದಿ ದರ ಕಡಿತ ವಿಚಾರದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್ ತಳೆದಿರುವ ನಿಲುವನ್ನು ಅವರು ಸ್ವಾಗತಿಸಿದರು.

ರಾಸುಗಳಿಗೆ ಕಾಲಬಾಯಿ ಜ್ವರ ಕಾಡಲಾರಂಭಿಸಿದೆ. ಅವುಗಳ ರಕ್ಷಣೆ ರಾಸುಗಳ ಮಾಲೀಕರದ್ದೇ ಆಗಿದೆ. ಪಶು ವೈದ್ಯಕೀಯ ಇಲಾಖೆ ಔಷಧ ಕೊಡುತ್ತದೆ ಎಂದು ಹೈನುಗಾರಿಕೆ ಸುಲಭದ ಉದ್ಯಮವೇನಲ್ಲ ಎಂಬುದರ ಬಗ್ಗೆ ತಿಳಿಸಿದರು.

ಜೂನ್ ತಿಂಗಳು ಆರಂಭವಾಗಿದೆ. ಜಿಲ್ಲೆಯ ಮಟ್ಟಿಗೆ ಮುಂಗಾರು ಆರಂಭವಾದಂತೆ. ಆದರೆ, ಕೆಲವು ಕಡೆ ರಸಗೊಬ್ಬರಕ್ಕೆ ಕೊರತೆ ಉಂಟಾಗಿದೆ, ಜಿಲ್ಲಾಡಳಿತ ಎಚ್ಚರವಹಿಸಬೇಕಾಗಿದೆ. ಕಳೆದ ವರ್ಷ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ಹಣ ಕೊಟ್ಟು ಖರೀದಿಸಬೇಕಾಗಿತ್ತು. ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚರವಹಿಸಬೇಕು ಎಂದರು. ಯಂತ್ರಧಾರೆ ಯೋಜನೆಯಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ಸರ್ಕಾರ ಬಾಡಿಗೆಗೆ ಕೊಡುತ್ತದೆ. ಆದರೆ ಬಹುತೇಕ ಯಂತ್ರೋಪಕರಣಗಳು ಹಳೆಯದಾಗಿವೆ ಮತ್ತು ಸುಸ್ಥಿತಿಯಲ್ಲಿಲ್ಲ. ಕೆಲವು ತುಕ್ಕು ಹಿಡಿದಿವೆ. ಇನ್ನು ಕೆಲವು ಸವೆದು ಹೋಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಮುಂಗಾರು ಕೃಷಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಳೆದ ವರ್ಷ ಲಾಕ್‌ಡೌನ್ ಘೋಷಿಸಿತ್ತು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ : ಹೂವು, ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರವಾಗಿ ಪ್ಯಾಕೆಜ್ ಘೋಷಿಸಿತ್ತು. ಆದರೆ ಇಲ್ಲಿಯವರೆ ಬಹುತೇಕರಿಗೆ ಈ ಪರಿಹಾರ ತಲುಪಿಯೇ ಇಲ್ಲ. ಈ ವರ್ಷ ಮತ್ತೆ ಪರಿಹಾರ ಘೋಷಣೆಯಾಗಿದೆ. ಅಧಿಕಾರಿಗಳು ಪರಿಹಾರ ದೊರಕಿಸಿಕೊಡುವರೇ ಎಂದು ಪ್ರಶ್ನಿಸಿದರು. ಸರ್ಕಾರ ಮತ್ತು ಜಿಲ್ಲಾಡಳಿತ ಕೈಗಾರಿಕೆಗಳ ಸಿಎಸ್‌ಆರ್ ನಿಧಿಯ ಮೂಲಕ ಸವಲತ್ತುಗಳನ್ನು ಒದಗಿಸುತ್ತಿದೆ. ರೈತಾಪಿ ವರ್ಗಕ್ಕೂ ಸಿಎಸ್‌ಆರ್ ನಿಧಿಯಿಂದ ನೆರವು ನೀಡಬೇಕು ಎಂದು ಎಚ್.ಪಿ.ಚಂದ್ರಶೇಖರ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ರಾಮನಗರ ತಾಲೂಕು ಅಧ್ಯಕ್ಷ ಸೀಬಕಟ್ಟೆ ಕೃಷ್ಣಪ್ಪ, ಮಾಗಡಿ ಘಟಕದ ಕಾರ್ಯಾಧ್ಯಕ್ಷ ಗಂಗಾಧರ್, ಪ್ರಮುಖರಾದ ಪಾದರಹಳ್ಳಿ ಕೃಷ್ಣಪ್ಪ, ಕಾಂತರಾಜ್, ಶಾಮಣ್ಣ, ಡಣಾಯ್ಕನಪುರ ರಾಮಯ್ಯ, ಸಿಡಲಕಲ್ಲು ಶೇಕ್ ಅಹಮದ್ ಮುಂತಾದವರು

ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net