

ರಾಮನಗರ : ಕರೊನಾ ಹೊಡೆತದಿಂದ ಬೆಂಗಳೂರು ಹಾಲು ಒಕ್ಕೂಟ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿದಿನ ಬರೋಬ್ಬರಿ 40 ಲಕ್ಷ ರೂ.ಗಳ ನಷ್ಟಕ್ಕೆ ಒಳಗಾಗುತ್ತಿದೆ.ಹೈನುಗಾರರ ಜೀವನಾಡಿಯಾಗಿರುವ ಬಮುಲ್‌ಗೆ ಇದೀಗ ಹೆಚ್ಚುವರಿ ಹಾಲು ಉತ್ಪಾದನೆ ಹಾಗೂ ಮತ್ತೊಂದೆಡೆ ಬೇಡಿಕೆ ಕುಸಿತ ಆಘಾತವನ್ನು ನೀಡಿದ್ದು, ನಷ್ಟ ತಪ್ಪಿಸಲು ಬೆಲೆ ಇಳಿಕೆ ಸೇರಿದಂತೆ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ಒಕ್ಕೂಟವಿದೆ.
ಹೆಚ್ಚಿದ ಪೂರೈಕೆ: ಕರೊನಾ ಸಂಕಷ್ಟದ ನಡುವೆ ಬಮುಲ್ ವ್ಯಾಪ್ತಿಯ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೇಸಿಗೆ ಮಳೆ ಆರಂಭಗೊಂಡ ನಂತರ ಪ್ರತಿ ದಿನ ಹಾಲು ಉತ್ಪಾದನೆ 17 ಲಕ್ಷ ಲೀಟರ್‌ಗೆ ಏರಿಕೆ ಆಗಿದೆ. ಆದರೆ, ಬೇಡಿಕೆ ಕುಸಿತದ ಸಮಯದಲ್ಲಿ ಉತ್ಪಾದನೆ ಹೆಚ್ಚಾಗಿರುವುದು ಆಡಳಿತ ಮಂಡಳಿ ನಿದ್ದೆಗೆಡಿಸಿದೆ. ಇದರ ನಡುವೆ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ಪಾದನೆ ಪ್ರಮಾಣ 20 ಲಕ್ಷ ಲೀಟರ್ ತಲುಪುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೇಡಿಕೆ ಕುಸಿತ: ಒಕ್ಕೂಟ ರೈತರಿಂದ ಸಂಗ್ರಹಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಅದರೆ, ಜನತಾ ಕರ್ಯ್ೂನಿಂದ ಬೆಂಗಳೂರಿನ ಜನ ಅರ್ಧಕ್ಕೆ ಅರ್ಧ ಖಾಲಿ ಆಗಿರುವುದು ಹಾಲಿನ ಬೇಡಿಕೆಯಲ್ಲಿ ಕುಸಿತ ಕಾಣುವಂತೆ ಮಾಡಿದೆ. ಪ್ರತಿ ದಿನ 11 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. ಆದರೆ ಈಗ ಇದು 8-9 ಲಕ್ಷಕ್ಕೆ ಲೀಟರ್‌ಗೆ ಕುಸಿದಿದ್ದು, ಉಳಿಯುತ್ತಿರುವ ಹಾಲಿನಿಂದ ನಷ್ಟ ಅನುಭವಿಸುವಂತಾಗಿದೆ.
ಹಾಲಿನ ಪುಡಿಗೆ ಬೆಲೆ ಇಲ್ಲ : ಬಮುಲ್ ಬಳಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಹಾಲಿನ ಪುಡಿ ಮಾಡುವುದು ಬಿಟ್ಟರೆ ಇತರೆ ಹಾಲಿನ ಉತ್ಪನ್ನಗಳಾಗಿ ತಯಾರಿಸಿ ಮಾರುಕಟ್ಟೆಗೆ ಬಿಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ತಯಾರಿಸಿದ್ದ ಸುಮಾರು 5 ಸಾವಿರ ಟನ್ ಹಾಲಿನ ಪುಡಿಗೆ ಬೇಡಿಕೆ ಇಲ್ಲದೆ ವಿವಿಧ ಉತ್ಪಾದನಾ ಘಟಕಗಳಲ್ಲಿಯೇ ಕೊಳೆಯುತ್ತಿದ್ದು, ಪ್ರಸ್ತುತ ಪ್ರತಿ ದಿನ ಸುಮಾರು 7-8 ಲಕ್ಷ ಲೀಟರ್ ಹಾಲಿನ ಪುಡಿ ಉತ್ಪಾದನೆ ಮಾಡಲಾಗುತ್ತಿದೆ. ಕರೊನಾ ನಿಯಂತ್ರಣಕ್ಕೆ ಬಂದು ಮಾರುಕಟ್ಟೆಯಲ್ಲಿ ಹಾಲಿನ ಪುಡಿಗೆ ಬೇಡಿಕೆ ಬಂದರಷ್ಟೇ ನಷ್ಟದ ಪ್ರಮಾಣ ಕೊಂಚ ತಗ್ಗಲಿದೆ ಎನ್ನುವುದು ಬಮುಲ್ ಅಧಿಕಾರಿಗಳ ಅಭಿಪ್ರಾಯ.
ನಷ್ಟ ಸರಿದೂಗಿಸಲು ಆಗುತ್ತಿಲ್ಲ: ಬಮುಲ್ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಪ್ರತಿ ಲೀಟರ್ ಹಾಲಿಗೆ ಪ್ರಸ್ತುತ 5-6 ರೂ. ನಷ್ಟ ಉಂಟಾಗುತ್ತಿದ್ದು, ಇದನ್ನು ಸರಿದೂಗಿಸಬೇಕಾದರೆ ರೈತರಿಂದ ಖರೀದಿ ಮಾಡುವ ಹಾಲಿನ ಬೆಲೆಯನ್ನು ಕಡಿತ ಮಾಡುವುದೊಂದೇ ಮಾರ್ಗವಾಗಿದೆ. ಆದರೆ ಕಳೆದ ವರ್ಷ ಕಡಿತಗೊಂಡಿದ್ದ ಹಣವನ್ನು ಸರಿದೂಗಿಸುವ ನಿಟ್ಟಿನಲ್ಲಿ ಇತ್ತೀಚಿಗಷ್ಟೇ ಬಮುಲ್ ಖರೀದಿ ಧರವನ್ನು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ದರ ಕಡಿತ ಮಾಡಿದರೆ ರೈತರಿಗೆ ನಷ್ಟ ಎನ್ನುವ ಕಾರಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ಸಂದಿಗ್ಧ ಸ್ಥಿತಿಗೆ ಸಿಲುಕಿದೆ.
ಬೇಕಿದೆ ರಾಜ್ಯ ಸರ್ಕಾರದ ನೆರವು : ಹಾಲು ಒಕ್ಕೂಟಕ್ಕೆ ಆಗುತ್ತಿರುವ ನಷ್ಟ ಇದೇ ರೀತಿ ಮುಂದುವರಿದರೆ ಅತಿ ದೊಡ್ಡ ಸಹಕಾರ ವ್ಯವಸ್ಥೆಗೆ ಪೆಟ್ಟು ಬೀಳುವುದು ನಿಶ್ಚಿತ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಬಮುಲ್ ಮತ್ತು ರೈತರ ಉಳಿವಿಗೆ ಮುಂದಾಗಬೇಕಿದೆ. ಹೆಚ್ಚಿನ ಅನುದಾನವನ್ನು ಬಮುಲ್‌ಗೆ ನೀಡುವ ಮೂಲಕ ಆಗುತ್ತಿರುವ ನಷ್ಟವನ್ನು ತಪ್ಪಿಸಿ ರೈತರು ಮತ್ತು ಸಹಕಾರ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎನ್ನುವ ಕೂಗು ಕೇಳಿ ಬಂದಿದೆ.
ಹಾಲು ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದರಿಂದಾಗಿ ಪ್ರತಿ ದಿನ ಸುಮಾರು 40 ಲಕ್ಷ ರೂ. ನಷ್ಟವಾಗುತ್ತಿದ್ದು, ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ಇದ್ದೇವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ನಮ್ಮ ನೆರವಿಗೆ ಬರಬೇಕು. ನರಸಿಂಹಮೂರ್ತಿ ಅಧ್ಯಕ್ಷರು, ಬಮುಲ್.