

ಮಾಗಡಿ : ಹೊರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆಯಿದ್ದು, ಏ.1ರಿಂದ ಪ್ರತಿ ಲೀಟರ್ ಹಾಲಿಗೆ 29.04 ಪೈಸೆ ನೀಡುವುದಾಗಿ ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು. ಪಟ್ಟಣದ ಬಮುಲ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಪಿಸಿಎಸ್‌ಗೆ 1.05 ರೂ. ಹಾಗೂ ಕಾರ್ಯದರ್ಶಿಗೆ 40 ಪೈಸೆ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 27.50ರೂ. ನೀಡುತ್ತಿದ್ದು, ರೈತರಿಗೆ 1 ಲೀಟರ್ ಹಾಲು ಉತ್ಪಾದಿಸಲು 35 ರೂ. ಖರ್ಚಾಗುತ್ತಿದೆ. ಈ ಸಂಬಂಧ ಕನಕಪುರದಲ್ಲಿ ಶುಕ್ರವಾರ ನಡೆದ 26ನೇ ಮಂಡಳಿ ಸಭೆಯಲ್ಲಿ ಕಾರ್ಯಕಾರಿ ಮಂಡಳಿ ಚರ್ಚಿಸಿ ರೈತರಿಗೆ ಹೆಚ್ಚಿನ ಒತ್ತು, ಸಹಕಾರ ನೀಡಲು ಹಾಲಿನ ದರ ನಿಗದಿ ಮಾಡಲಾಗಿದೆ ಎಂದರು.
ಕರೊನಾ ಸಂದರ್ಭದಲ್ಲಿಯೂ ರೈತರಿಗೆ ಸೌಲಭ್ಯ ನೀಡಲಾಗಿದೆ. ಉತ್ಪಾದಕರಿಗೆ ಹಾಲಿನ ದರದ ಜತೆಗೆ ಪ್ರೋತ್ಸಾಹಧನವಾಗಿ ವಾರ್ಷಿಕ 50 ಕೋಟಿ ರೂ. ನೀಡಲಾಗುತ್ತಿದೆ. ಒಕ್ಕೂಟದಲ್ಲಿ ಸೋರುವಿಕೆಯನ್ನು ಕಡಿಮೆ ಮಾಡಿ ರೈತರಿಗೆ ಹೆಚ್ಚು ನೆರವು ನೀಡಲಾಗುವುದು ಎಂದರು.
ವಿಸ್ತರಣಾಧಿಕಾರಿಗಳಾದ ರಂಗಸ್ವಾಮಿ, ಪ್ರಮೋದ್, ಮಂಜುಳ, ಶೋಭ, ಉಮೇಶ್, ಸಿಸಿಒ ಗಣೇಶ್. ನಾಗೇಶ್, ಹರೀಶ್, ಶಿವಕುಮಾರ್ ಇತರರು ಇದ್ದರು.
ಎರಡು ತಿಂಗಳಲ್ಲಿ ಕ್ಷೀರಭವನಕ್ಕೆ ಚಾಲನೆ
ಕಳೆದ 25 ವರ್ಷಗಳಿಂದ ಕ್ಯಾಂಪ್ ಕಚೇರಿ ಕಟ್ಟಲು ಸಾಧ್ಯವಾಗಿಲ್ಲ. ಕಚೇರಿ ಕಟ್ಟಲು ಟಿಎಪಿಸಿಎಂಎಸ್‌ಗೆ ಮನವಿ ಸಲ್ಲಿಸಲಾಗಿದ್ದು, 10 ಗುಂಟೆ ಜಮೀನು ನೀಡಲಾಗಿದೆ. ಇದರಲ್ಲಿ ಕ್ಷೀರ ಭವನ ನಿರ್ಮಿಸಲು ಇನ್ನೆರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಒಕ್ಕೂಟಕ್ಕೆ 15 ಎಕರೆ ಜಮೀನು ನೀಡುವಂತೆ ಶಾಸಕ ಎ.ಮಂಜುನಾಥ್, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಜಮೀನು ನೀಡಿಲ್ಲ ಎಂದು ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದಲ್ಲಿ ಟೆಟ್ರಾಪ್ಯಾಕ್ ಘಟಕ : ಕಳೆದ ಬಾರಿ 19.10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 7 ಲಕ್ಷ ಲೀಟರ್‌ಗೆ ಮಾರುಕಟ್ಟೆ ಇತ್ತು. ಈ ವೇಳೆ ಹಾಲಿನ ಪೌಡರ್ ಉತ್ಪಾದನೆಗೆ ಗಮನ ಹರಿಸಲಾಯಿತು. ಆದರೆ ಈ ಬಾರಿ 21 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ. ಕನಕಪುರದಲ್ಲಿ 60 ಮೆಟ್ರಿಕ್ ಟನ್ ಪೌಡರ್ ಘಟಕ ಸ್ಥಾಪಿಸಲಾಗುತ್ತಿದ್ದು, 4 ಸಾವಿರ ಟನ್ ಸಾಮರ್ಥ್ಯದ ಬೆಣ್ಣೆ ಗೋದಾಮು, ಟೆಟ್ರಾ ಪ್ಯಾಕ್‌ಗೆ ಬೇಡಿಕೆಯಿದ್ದು ಬೆಂಗಳೂರು ಒಂದರಲ್ಲೇ 2 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಟೆಟ್ರಾಪ್ಯಾಕ್ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ನರಸಿಂಹಮೂರ್ತಿ ಮಾಹಿತಿ ನೀಡಿದರು.