

ಶಿವಮೊಗ್ಗ: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ. ರೈತರು ಈ ಬಗ್ಗೆ ಗಮನಹರಿಸಬೇಕು ಎಂದು ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್ವರಪ್ಪ ಸಲಹೆ ನೀಡಿದರು.
ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಕೃಷಿ ಅರಣ್ಯ ಸಮನ್ವಯ ಸಂಶೋಧನಾ ಯೋಜನೆಯಿಂದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಬಿದಿರು ಸಸ್ಯಗಳ ಬೆಳೆಸುವಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿದಿರು ಆದಾಯ ಕೊಡುವ ಬೆಳೆ. ಅದರ ಪಾಡಿಗೆ ಅದು ಬೆಳೆಯುತ್ತದೆ. ರೋಗ, ಕೀಟ ಬಾಧೆ ಸಮಸ್ಯೆ ಇಲ್ಲ. ಹಣ ಬೇಕಾದಾಗ ಬಿದಿರು ಕಡಿಯಬಹುದು. ಇಲ್ಲವಾದರೆ ಹಾಗೇ ಬಿಡಬಹುದು. ಬಿದಿರು ಬೇಸಾಯಕ್ಕೆ ಬಂಡವಾಳ ಬೇಕಿಲ್ಲ. ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ಪ್ರತಿ ವರ್ಷವೂ ಬಿದಿರು ಕಟಾವು ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಸಾಧ್ಯ. ಮಾರಿಹಾಳ ಜಾತಿಯ ಬಿದಿರು ಬುಟ್ಟಿ ಮಾಡಲು ಬಳಕೆಯಾಗುತ್ತದೆ. ಮುಳ್ಳು ರಹಿತ. ಈ ಜಾತಿಯ ಬಿದಿರನ್ನು ಮೇದಾರರು ಹೆಚ್ಚು ಖರೀದಿಸುತ್ತಾರೆ ಎಂದರು.
ಮಾರಿಹಾಳ ಜಾತಿ ಬಿದಿರು ಗಟ್ಟಿಯಾಗಿರುವುದರಿಂದ ಬುಟ್ಟಿ ತಯಾರಿಕೆಗೆ ಹೆಚ್ಚು ಬಳಕೆಯಾಗುತ್ತದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಎರಡೂ ಪ್ರದೇಶದಲ್ಲಿ ಈ ತಳಿಯ ಬಿದಿರು ಚೆನ್ನಾಗಿ ಬೆಳೆಯುತ್ತದೆ. ಮಾಲ್ಕಿ ಜಮೀನಿನಲ್ಲಿ ಬೆಳೆದ ಬಿದಿರನ್ನು ರೈತರೇ ಮಾರಾಟ ಮಾಡಬಹುದು. ಆದರೆ ಬಿದಿರು ಕಟಾವು ಮತ್ತು ಸಾಗಣೆ ಮಾಡಲು ಅರಣ್ಯ ಇಲಾಖೆ ಅನುಮತಿ ಅಗತ್ಯ ಎಂದು ರೈತರಿಗೆ ಮಾಹಿತಿ ನೀಡಿದರು.
ಕೃಷಿ ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಕಣ್ಣೂರ್, ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಜನರಿಗೆ ಬಿದಿರು ಸಸ್ಯ ವಿತರಿಸಲಾಯಿತು.