ಬಿದಿರಿನ ಬೆಳೆ ಆದಾಯದ ಸೆಲೆ

putin (4)
Published on

| ನವೀನ್ ಬಿಲ್ಗುಣಿ, ಶಿವಮೊಗ್ಗ

ಮಲೆನಾಡಿಗೆ ಸೀಮಿತವಾಗಿದ್ದ ಅಡಕೆ ಬೆಳೆ ಬಯಲು ಸೀಮೆಗೆ ಲಗ್ಗೆಯಿಟ್ಟಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 1.40 ಲಕ್ಷ ಹೆಕ್ಟೇರ್​ಗೆ ವ್ಯಾಪಿಸಿದೆ. ಭತ್ತದ ಕಣಜವಾಗಿದ್ದ ಜಿಲ್ಲೆ ಅಡಕೆ ಮಯವಾಗುತ್ತಿದೆ. ಆದರೆ ಇಲ್ಲೊಬ್ಬ ರೈತ ಅಡಕೆಗೆ ಪರ್ಯಾಯವಾಗಿ ಬಿದಿರು ಬೆಳೆದು ಸೈ ಎನಿಸಿಕೊಂಡಿದ್ದಾರೆ. ನಾಲ್ಕು ಎಕರೆ ಜಾಗದಲ್ಲಿನ ಬಿದಿರು ಕಟಾವಿಗೆ ಬಂದಿದ್ದು, ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಮಲೆನಾಡಿನ ದಟ್ಟಾರಣ್ಯದಲ್ಲಿ ಬಿದಿರು ಯಥೇಚ್ಛವಾಗಿ ತಾನಾಗಿಯೇ ಬೆಳೆಯುತ್ತಿತ್ತು. ಬೇಸಿಗೆಯಲ್ಲಿ ಬೆಂಕಿ ಬಿದ್ದೋ ಅಥವಾ ಮಾನವರಿಂದ ಕಡಿತಲೆಗೆ ಒಳಗಾಗಿ ಕ್ರಮೇಣ ಅರಣ್ಯದಿಂದ ನಾಶವಾಗುತ್ತಿದೆ. ಬೇಕಾದಷ್ಟು ಸಿಗುತ್ತಿದ್ದ ಬಿದಿರು ಇದೀಗ ಆದಾಯದ ಮೂಲವಾಗುತ್ತಿದೆ. ಲಾಭದಾಯಕ ಹಸಿರು ಚಿನ್ನ ಎಂಬಂತಾಗಿದ್ದು, ರೈತರು ನಿಧಾನವಾಗಿ ಬಿದಿರು ಬೆಳೆದು ಆದಾಯ ಗಳಿಸುವುದನ್ನು ಎದುರು ನೋಡುತ್ತಿದ್ದಾರೆ. ಅದರಲ್ಲಿ ಸಾಗರ ತಾಲೂಕು ಭೈರಪುರದ ರೈತ ಕೆ.ಸಿ.ಮೂರ್ತಿ ಕೂಡ ಒಬ್ಬರು.

20 ಎಕರೆ ಭೂಮಿಯನ್ನು ಹೊಂದಿರುವ ಮೂರ್ತಿ, 12 ಎಕರೆಯಲ್ಲಿ ಅಡಕೆ ಬೆಳೆದಿದ್ದಾರೆ. ಪರ್ಯಾಯ ಬೆಳೆಯತ್ತ ಗಮನ ಹರಿಸಿ ರಬ್ಬರ್ ಬೆಳೆದಿದ್ದರು. ಆದರೆ ಕೈಹಿಡಿಯದ ಕಾರಣ ತೆಗೆದು ಕಾಫಿ ಬೆಳೆದಿದ್ದರು. ಆದರೆ ನಿರ್ವಹಣೆ ಹೊರೆಯಿಂದ ಕಾಫಿಯನ್ನೂ ತೆಗೆದರು. ನಂತರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ರೈತ ತರಬೇತಿ ಕೇಂದ್ರದ ರಾಮಕೃಷ್ಣ ಹೆಗಡೆ ಮಾರ್ಗದರ್ಶನದಲ್ಲಿ 4 ಎಕರೆ ಜಾಗದಲ್ಲಿ 4 ವರ್ಷದ ಹಿಂದೆ 700 ಬರ್ವ ಬಿದಿರು ಹಾಗೂ ಟುಲ್ಡಾ ಬಿದಿರು ನಾಟಿ ಮಾಡಿದ್ದು, 5ನೇ ವರ್ಷಕ್ಕೆ ಕಾಲಿಟ್ಟಿದೆ. ಉತ್ತಮ ಬಿದಿರು ನಾಲ್ಕರಿಂದ 5 ವರ್ಷದಲ್ಲಿ ಕಟಾವಿಗೆ ಬರಲಿದ್ದು, ಮೂರ್ತಿ ಬೆಳೆದಿರುವ ಬಿದಿರು ಕೂಡ ಕಟಾವಿಗೆ ಸಿದ್ಧವಾಗಿದೆ.

ಅಡಕೆಯಿಂದ ಆದಾಯ ಬರುತ್ತದೆ. ಅದೇ ರೀತಿ ಬಿದಿರಿನಲ್ಲೂ ಲಾಭ ನಿರೀಕ್ಷೆ ಮಾಡುತ್ತಿದ್ದೇನೆ. ಕಣಜ ಸಂಸ್ಥೆಯ ಮೂಲಕ ಬಿದಿರು ನಾಟಿ ಮಾಡಿದ್ದು, ಅದರಿಂದ ಸ್ಟಿಕ್(ಕಡ್ಡಿ), ಊದುಬತ್ತಿ, ಚಾರ್​ಕೋಲ್(ಅಕ್ವೋಗಾಡ್​ನಲ್ಲಿ ಬಳಕೆ), ಬ್ಯಾಂಬೋ ಬೋರ್ಡ್ ಸೇರಿ ವಿವಿಧ ಉತ್ಪನ್ನ ಉತ್ಪಾದಿಸುವ ಯೋಜನೆ ಇದೆ. | ಕೆ.ಸಿ. ಮೂರ್ತಿ ಬಿದಿರು ಬೆಳೆದ ರೈತ

ಕಣಜ ಸಂಸ್ಥೆಯ ನೆರವು

ಸಾಗರದ ಕಣಜ ಸಂಸ್ಥೆಯು ಬಿದಿರು ಬೆಳೆಯನ್ನು ಆರಂಭಿಸಿದ್ದು ರೈತರನ್ನು ಪ್ರೋತ್ಸಾಹಿಸುತ್ತಿದೆ. ಸಾಮಾನ್ಯವಾಗಿ ಬಿದಿರನ್ನು ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಸಾಗರ, ಹೊಸನಗರ ಹಾಗೂ ಸೊರಬ ಭಾಗದ ರೈತರೆಲ್ಲರೂ ಸೇರಿ ಈಗ ಬಿದಿರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಣಜ ಸಂಸ್ಥೆಯೇ ಬಿದಿರು ಬೆಳೆಯುವವರಿಗೆ ಸಸಿ ಕೊಟ್ಟು, ನಂತರ ತಾನೇ ಖರೀದಿ ಮಾಡಲಿದೆ. ಅದಕ್ಕೆ ಪೂರಕವಾಗಿ ಬಿದಿರು ಬೆಳೆಯಲು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಮಾರ್ಗದರ್ಶನ ನೀಡುತ್ತಿದೆ. ಹಾಗಾಗಿ ಕಣಜ ಸಂಸ್ಥೆಯ ನೆರವಿನೊಂದಿಗೆ ಮೂರ್ತಿ ಬಿದಿರು ಬೆಳೆದಿದ್ದಾರೆ. ಬಿದಿರು ಸಸಿ ಮತ್ತು ಸಾವಯವ ಗೊಬ್ಬರ ನೀಡಿದ್ದು, ಸಂಸ್ಥೆಯವರೇ ಕಟಾವು ಮಾಡಲಿದ್ದಾರೆ.

ಬಿದಿರಿಗೆ ಮತ್ತೆ ಜೀವಕಳೆ

ಒಂದು ಕಾಲದಲ್ಲಿ ಬಿದಿರು ಮನುಷ್ಯನ ಜೀವನದುದ್ದಕ್ಕೂ ಅತಿಮುಖ್ಯ ಮತ್ತು ಅವಶ್ಯಕವಾಗಿತ್ತು. ಹುಟ್ಟಿನಿಂದ ಸಾಯುವ ವರೆಗೂ ನಾನಾ ಸಂದರ್ಭದಲ್ಲಿ ಬಿದಿರನ್ನು ಅವಲಂಬಿಸುತ್ತಿದ್ದರು. ತೊಟ್ಟಿಲಿನಿಂದ ಹಿಡಿದು, ಮಂಚ, ಕುರ್ಚಿ, ಬೇಲಿ, ಭತ್ತ ಶೇಖರಿಸುವ ಪಂತ(ಉಗ್ರಾಣ), ಊರುಗೋಲು, ಕೊನೆಗೆ ಮೃತಪಟ್ಟಾಗ ಚಟ್ಟ ಕಟ್ಟುವುದಕ್ಕೂ ಬಳಕೆ ಆಗುತ್ತಿತ್ತು. ಕಾಲಾನಂತರ ಬಿದಿರಿನ ಅವಲಂಬನೆ ಕಡಿಮೆ ಆಗಿದ್ದರೂ ಇದೀಗ ಮತ್ತೆ ಬಿದಿರಿನ ಬೆಳೆಗೆ ಜೀವಕಳೆ ಬಂದಿದೆ.

ಮಲೆನಾಡಿನಲ್ಲಿ ಅಡಕೆಗೆ ಪರ್ಯಾಯ

ಬಿದಿರು ಕೃಷಿ ಹೇಗೆ?

  • ನಾಟಿ ಮಾಡಿದ 4ರಿಂದ 5 ವರ್ಷಗಳಲ್ಲಿ ಕಟಾವಿಗೆ ಬರಲಿದೆ
  • ಯಾವುದೇ ರೀತಿಯ ಮಣ್ಣು, ಬರಗಾಲ ಮತ್ತು ಒಣ ಭೂಮಿಯಲ್ಲೂ ಬೆಳೆಯುತ್ತದೆ
  • ಆರಂಭಿಕ ಕೆಲವು ತಿಂಗಳ ನಂತರ ನೀರಾವರಿ ಅಗತ್ಯವಿಲ್ಲ
  • ಮರದ ಬದಲಿಯಾಗಿ ಕಟ್ಟಡ ನಿರ್ಮಾಣಕ್ಕೂ ಬಳಕೆ
  • ಪೌಷ್ಟಿಕಾಂಶದ ಮೂಲವಾಗಿ ಚಿಗುರು(ಕಳಲೆ) ಸೇವನೆ
  • ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ನಾರು ಬಳಸಿ ಬಟ್ಟೆ ತಯಾರಿಕೆ
  • ಅಗರಬತ್ತಿ, ಪೀಠೋಪಕರಣ, ಕಾಗದ, ಇದ್ದಿಲು, ಸಾವಯವ ಗೊಬ್ಬರ ತಯಾರಿಕೆ
  • ಮಣ್ಣಿನ ಸವೆತ ತಡೆ, ಮರಗಳಿಗಿಂತ ಹೆಚ್ಚು ಆಮ್ಲಜನಕ ಉತ್ಪಾದನೆ

ಬಿದಿರಿನ ವಿಧಗಳು

ಬರ್ವ, ಆಸ್ಪರ್, ಟುಲ್ಡ, ಒಲಿವರಿ ಅಥವಾ ಲಾಠಿ ಬಿದಿರು, ಗಡುವ, ಲ್ಯಾಮಿಲ್ ಟೋನಿ, ಪಾಲಿಮರ್ಪ ಬಿದಿರು.

ಆತ್ಮನಿರ್ಭರದಲ್ಲೂ ಸ್ಥಾನ

ಬಿದಿರು ಬೇಸಾಯವನ್ನು ಸಾಗರ, ಹೊಸನಗರ ಹಾಗೂ ಸೊರಬದಲ್ಲಿ ಮಾಡುತ್ತಿರುವುದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಇಲ್ಲಿನ ಪ್ರತಿಯೊಬ್ಬ ರೈತರೂ ಸಂಸ್ಥೆಯ ಮೂಲಕ ಬಿದಿರು ಬೆಳೆಯುತ್ತಿದ್ದಾರೆ. ಬಿದಿರು ನಮ್ಮ ದೇಶದ ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿ ಪೂರೈಕೆ ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಆಶಯವಾಗಿದೆ. ಜತೆಗೆ 10 ಲಕ್ಷ ಮಹಿಳೆಯರಿಗೆ ಸರಾಸರಿ ಒಂದು ವರ್ಷಕ್ಕೆ 1 ಲಕ್ಷ ರೂ. ಉತ್ಪಾದನೆ ತೆಗೆದುಕೊಳ್ಳಬೇಕೆಂಬ ಕಾರ್ಯಕ್ರಮವಾಗಿದೆ. ಭಾರತದ ನ್ಯಾಷನಲ್ ರೂರಲ್ ಲೈವ್ಲಿ ವುಡ್ ಮಿಷನ್ ಅಡಿ ಯೋಜನೆ ಹೊರಹೊಮ್ಮಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net