

ಬೆಂಗಳೂರು: ರಾಜಕೀಯ ಮತ್ತು ಉದ್ಯೋಗ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಹೊಸದಾಗಿ ಹೊರಡಿಸಿರುವ ಮರುವರ್ಗೀಕರಣ ಆದೇಶದಿಂದ ಬಲಿಜ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದೆ ಬಲಿಜ ಸಮುದಾಯವನ್ನು ಶಿಕ್ಷಣ ಮೀಸಲಾತಿಗೆ ಮಾತ್ರ ಪ್ರವರ್ಗ ‘2ಎ’ಗೆ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಪ್ರವರ್ಗ ‘3ಎ’ಗೆ ಸೇರಿಸಲಾಗಿತ್ತು. ಮರುವರ್ಗೀಕರಣ ಮೀಸಲಾತಿ ಆದೇಶದಿಂದ ನಮ್ಮನ್ನು ಈಗ ಪ್ರವರ್ಗ ‘2ಸಿ’ಗೆ ಸರ್ಕಾರ ಸೇರಿಸಿದೆ. ಇದರಿಂದ ನಮಗೆ ಸಾಸಿವೆ ಕಾಳುನಷ್ಟು ಉಪಯೋಗವಾಗಲ್ಲ. ಮೀಸಲಾತಿ ಮಾರ್ಪಾಡು ಮಾಡುವುದರಿಂದ ಬಲಿಷ್ಠ ಸಮುದಾಯಗಳಿಗೆ ಇನ್ನಷ್ಟು ಅನುಕೂಲವಾಗಿದೆಯೇ ಹೊರತು ನಮಗೆ ತುಂಬ ಅನ್ಯಾಯವಾಗಲಿದೆ ಎಂದು ಬಲಿಜ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಹೇಳಿದ್ದಾರೆ.
ಪ್ರವರ್ಗ ‘2ಎ’ಗೆ ವಾಪಸ್ಸಾದರೆ ನಮ್ಮ ಸಮುದಾಯಕ್ಕೆ ಉದ್ಯೋಗ ಮೀಸಲಾತಿ ಜತೆಗೆ ರಾಜಕೀಯ ಪ್ರಾತಿನಿಧ್ಯತೆ ದೊರೆಯಲಿದೆ. ಈಗ ಪ್ರವರ್ಗ ‘2ಸಿ’ ಸೇರ್ಪಡೆ ಮಾಡುವುದರಿಂದ ನಮಗೆ ಶೇ.6 ಮೀಸಲಾಗುತ್ತದೆ. ಆದರೆ, ಹಿಂದುಳಿದ ವರ್ಗಗಳ ಮೀಸಲಾತಿಯಿಂದ ವಂಚಿತರಾದರೆ ಪ್ರಬಲ ಸಮಾಜಗಳಾದ ಒಕ್ಕಲಿಗ, ರೆಡ್ಡಿ ಸೇರಿ ಇತರ ಸಮುದಾಯಗಳ ವಿರುದ್ಧ ಸ್ಥಳೀಯ ಚುನಾವಣೆಗಳಲ್ಲಿ ಪ್ರಬಲವಾಗಿ ಎದರಿಸಲು ಸಾಧ್ಯವಾಗಲ್ಲ. ಒಂದುವೇಳೆ ಆದಾಯ ತೆರಿಗೆ ಪಾವತಿದಾರರದಲ್ಲಿ ಸಾಮಾನ್ಯ ವರ್ಗದ ಕೋಟಾ ಅಡಿ ಬರುತ್ತದೆ. ಆಗ ಸ್ಥಳೀಯ ಚುನಾವಣೆಗಳಲ್ಲಿ ಬಲಿಷ್ಠ ಸಮುದಾಯಗಳ ಜತೆ ಸೆಣಸಬೇಕಾಗುತ್ತದೆ. ಹಾಗಾಗಿ, ಪ್ರವರ್ಗ ‘2ಸಿ’ ಸೇರ್ಪಡೆಯಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಆದ್ದರಿಂದ, ಬಲಿಜ ಸಮುದಾಯವನ್ನು ಪ್ರವರ್ಗ ‘2ಎ’ಗೆ ಮರು ಸೇರಿಸಬೇಕು. ಬರುವ ದಿನಗಳಲ್ಲಿ ಮೀಸಲಾತಿ ಅನ್ಯಾಯದ ಬಗ್ಗೆ ಬಲಿಜ ಜಾಗೃತಿ ಸಮಾವೇಶ ಆಯೋಜಿಸುವುದಾಗಿ ರಮೇಶ್ ತಿಳಿಸಿದ್ದಾರೆ.