

ಶಿವಮೊಗ್ಗ: ಬಳಿಗಾರ್ ಅವರ ಬದುಕು ಸಹೃದಯತೆ, ಸಜ್ಜನಿಕೆ, ಮಾನವೀಯ ಮೌಲ್ಯಗಳು ಹಾಗೂ ಜನಪರ ಕಾಳಜಿಯ ಸಂಗ್ರಹ ಎಂದು ಲೋಕಸಭಾ ಸದಸ್ಯ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಮಂಗಲ ಭವನದಲ್ಲಿ ಭಾನುವಾರ ಬಳಿಗಾರ್ ಅಭಿಮಾನಿಗಳು ಆಯೋಜಿಸಿದ್ದ ಎಚ್.ಟಿ.ಬಳಿಗಾರ್ ಸ್ಮರಣೆ. ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರೀರ ನಮ್ಮ ಕಣ್ಮುಂದೆ ಇಲ್ಲದಿರಬಹುದು, ಆದರೆ ಜನಮನದಲ್ಲಿ ಅವರ ನೆನಪು ಚಿರಸ್ಥಾಯಿ ಆಗಿರುತ್ತದೆ. ಒಬ್ಬ ವ್ಯಕ್ತಿ ಶಕ್ತಿಯಾಗಿ, ಜನತೆಯ ಸಂಕಷ್ಟದಲ್ಲಿ ಪಾಲುದಾರನಾದಾಗ, ಅವರ ಕಂಬನಿ ಒರೆಸಿದಾಗ ಬೆಳವಣಿಗೆ ಸಾಧ್ಯ ಎಂದರು.
ಬಳಿಗಾರ್ ಅವರಲ್ಲಿ ಜನಸೇವೆಯ ತುಡಿತವಿತ್ತು. ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಅವರು ಯಾವತ್ತೂ ಅಹಂಕಾರದ ಅಂಗಳಕ್ಕೆ ಜಾರಿದವರಲ್ಲ. ಅವರೊಬ್ಬ ನಗುಮುಖದ ನಾಯಕ, ಶರಣರನ್ನು ಮರಣದಲ್ಲಿ ಕಾಣು ಎನ್ನುವಂತೆ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ರಾಜಕಾರಣದ ಅಂಗಳದಲ್ಲಿ ಅಧಿಕಾರ ಅವರನ್ನು ಹುಡುಕಿಕೊಂಡು ಬಂದರೂ ಹಿಗ್ಗದೆ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು ಎಂದು ತಿಳಿಸಿದರು.
ಅವರನ್ನು ಕೇಂದ್ರ ಆಹಾರ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲು ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದೆ. ಬಹುಶಃ ಆ ನೇಮಕ ಆದೇಶ ಇನ್ನೆರಡು ದಿನಗಳಲ್ಲಿ ಬಂದರೂ ಆಶ್ಚರ್ಯವಿಲ್ಲ. ಆದರೆ ಅವರ ನಿಧನದ ಸುದ್ದಿ ನಮಗೆ ಬರಸಿಡಿಲು ಬಡಿದಂತಾಗಿದೆ. ಬಳಿಗಾರ್ ಅವರು ಬದುಕಿನುದ್ದಕ್ಕೂ ಹಲವು ತತ್ವಾದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದರು. ಅವರು ಯಾವ ಪಕ್ಷದಲ್ಲಿದ್ದರೂ ಯಾರೂ ಕೂಡ ಅವರ ಬಗ್ಗೆ ಹಗುರವಾಗಿ ಮಾತನಾಡದಂತೆ ಮೌಲ್ಯಯುತ ಬದುಕನ್ನು ಕಟ್ಟಿಕೊಂಡಿದ್ದರು ಎಂದರು.
ಕಡೇನಂದಿಹಳ್ಳಿಯ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಳಿಗಾರ್ ಪುತ್ರಿ ಭೂಮಿಕಾ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸುಧೀರ್, ಕೆ.ಎಸ್.ಹುಚ್ರಾಯಪ್ಪ, ಸುರೇಶ್ ಹೂವಿನಮಂಡಿ, ವೈಭವ್ ಬಸವರಾಜ್, ಹನುಮಂತಪ್ಪ, ಪಾಪಯ್ಯ ಇತರರಿದ್ದರು.