ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ಮತ್ತೊಂದು ಭೂಗತ ಹಿನ್ನೆಲೆಯ ಚಿತ್ರ ‘ಬಲರಾಮನ ದಿನಗಳು’. 1985ರ ಹಿನ್ನೆಲೆಯ ಈ ರೆಟ್ರೋ ಕಥೆಯಲ್ಲಿ ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಮೂರು ಹಾಡುಗಳು, ಟೀಸರ್ ಮೂಲಕ ಸಿನಿಮಾ ಭರವಸೆ ಮೂಡಿಸಿದ್ದು, ಇದೇ 26ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಭೂಗತ ಲೋಕದ ಕಥೆಗೆ ಇದೀಗ ರ್ಯಾಪ್ ಸಾಂಗ್ ಟಚ್ ನೀಡಲಾಗಿದ್ದು, ‘ಯಾರಿಲ್ಲ ಯಾರಿಲ್ಲ’ ಎಂಬ ಹೊಸ ರ್ಯಾಪ್ ಸಾಂಗ್ ಇತ್ತೀಚೆಗೆ ರಿಲೀಸ್ ಮಾಡಲಾಯಿತು. ಗಾಯಕ ಅಲೋಕ್ (ಆಲ್‌ಒಕೆ) ರಚಿಸಿ, ಧ್ವನಿಯಾಗಿರುವ ಈ ಹಾಡಿಗೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ‘ವಿನೋದ್ ಪ್ರಭಾಕರ್ ಜತೆ ಕೆಲಸ ಮಾಡಬೇಕೆನ್ನುವುದು ಬಹುವರ್ಷಗಳ ಕನಸು ಇದೀಗ ನನಸಾಗಿದೆ. ಇನ್ನು ಸಂಗೀತ ದಿಗ್ಗಜ ಸಂತೋಷ್ ನಾರಾಯಣನ್ ಕೈಜೋಡಿಸಿರುವುದು ಡಬಲ್ ಧಮಾಕಾ. ವಿನೋದ್ ನಡೆದು ಬಂದ ಹಾದಿಯನ್ನು ತಲೆಯಲ್ಲಿಟ್ಟುಕೊಂಡೆ ಈ ಹಾಡು ಬರೆದೆ. ಕನ್ನಡ ಸಿನಿಮಾ ಲೋಕಕ್ಕೆ ಈ ರ್ಯಾಪ್ ಸಾಂಗ್ ಹೊಸ ಅಧ್ಯಾಯ ಬರೆಯಲಿದ್ದು, ಬಲರಾಮನಿಗೆ ಬಲ ತರಲಿದೆ’ ಎಂದು ಅಲೋಕ್ ಖುಷಿ ಹಂಚಿಕೊಂಡರು. ವಿನೋದ್ ಪ್ರಭಾಕರ್, ‘ಈ ಹಾಡಿನ ಸ್ಟಾರ್ ಅಲೋಕ್. ಎಲ್ಲ ಕ್ರೆಡಿಟ್ ಅವರಿಗೆ ಸಲ್ಲಬೇಕು. ಇನ್ನು ತಂದೆ ಪ್ರಭಾಕರ್ ಬಿಟ್ಟು ಹೋದ ಮತ್ತೊಂದು ಅಧ್ಯಾಯವನ್ನು ನಾನು ಇಂಡಸ್ಟ್ರಿಯಲ್ಲಿ ಮುಂದುವರಿಸುತ್ತಿದ್ದೇನೆ. ಮೊದಲಿಗೆ ಇಂಡಸ್ಟ್ರಿಗೆ ಬಂದಾಗ ಕೆಲ ತಪ್ಪು ಆಯ್ಕೆಗಳಿಂದ ಹತಾಷನಾದೆ. ಅದಕ್ಕೆ ನನಗೆ ನಾನೇ ‘ದಾರಿ ತಪ್ಪಿದ ಮಗ’ ಎಂದು ಕರೆದುಕೊಳ್ಳುವೆ. ‘ಮಾದೇವ’ ಬಳಿಕ ಹಂತ ಹಂತವಾಗಿ ಬೆಳೆಯುತ್ತಿದ್ದೇನೆ. ಪ್ರಭಾಕರ್ ಮಾಡದ ಸಿನಿಮಾಗಳನ್ನು ನಾನು ಮಾಡುತ್ತೇನೆ. ನನ್ನ ಪ್ರತಿ ಯಶಸ್ಸಿನಿಂದ ನನ್ನ ತಂದೆಯ ಆಶೀರ್ವಾದ, ಅಭಿಮಾನಿಗಳ ಹಾರೈಕೆ ಇದೆ. ಈ ‘ಬಲರಾಮನ ದಿನಗಳು’ ನನಗೆ ಮತ್ತಷ್ಟು ಬಲ ನೀಡಲಿದೆ’ ಎಂದರು. ವಿನೋದ್, ಪ್ರಿಯಾ ಜತೆ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ವಿನಯ್ ಗೌಡ ಕಲಾಬಳಗದಲ್ಲಿದ್ದಾರೆ.