

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಆರ್ಥಿಕ ಸಾಲಿನ ಮುಂಗಡಪತ್ರವನ್ನು ಶುಕ್ರವಾರ ಮಂಡಿಸಿದ್ದಾರೆ. ಇದು ಅವರ ಚೊಚ್ಚಲ ಬಜೆಟ್ ಎಂಬುದರ ಜತೆಗೆ, 2023ರ ಮೇ ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇದರ ಸ್ವರೂಪ ಹೇಗಿರಬಹುದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಆರ್ಥಿಕ ಮಿತಿಗಳ ನಡುವೆಯೂ ಸಮತೋಲನದ ಆಯವ್ಯಯವನ್ನು ನೀಡುವುದಕ್ಕೆ ಸಿಎಂ ಸರ್ಕಸ್ ನಡೆಸಿರುವುದು ಸ್ಪಷ್ಟಗೋಚರ. ಹೊಸ ತೆರಿಗೆ ಹೇರದಿರುವುದರಿಂದ ಜನರಿಗೆ ಸ್ವಲ್ಪ ನಿರಾಳತೆ ಸಿಕ್ಕಿದೆ. ಬಹುತೇಕ ಎಲ್ಲ ವಲಯಗಳಿಗೂ ಅವರು ಕೊಡುಗೆ ಘೋಷಿಸಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಸಮಾಜ ಕಲ್ಯಾಣ...ಹೀಗೆ ವಿವಿಧ ರಂಗಗಳಿಗೆ ಸಂಬಂಧಿಸಿ ಯೋಜನೆಗಳು ಘೋಷಣೆಯಾಗಿವೆ. ಯಶಸ್ವಿನಿ ಯೋಜನೆ ಮರುಜಾರಿ, ಅಕ್ರಮ ಸಕ್ರಮ ಯೋಜನೆ ಇತ್ಯಾದಿ ಬಗ್ಗೆ ಈ ಹಿಂದೆಯೇ ಪ್ರಕಟಿಸಲಾಗಿದ್ದು, ಈಗ ಬಜೆಟ್ನಲ್ಲಿ ಅವಕ್ಕೆ ಅಧಿಕೃತತೆಯ ಮೊಹರು ಬಿದ್ದಂತಾಗಿದೆ. ಇಂಥ ಕೆಲವು ಘೋಷಣೆಗಳನ್ನು ಜನರು ಬಹುದಿನದಿಂದ ನಿರೀಕ್ಷಿಸುತ್ತಿದ್ದು, ಅವನ್ನು ಪರಿಣಾಮಕಾರಿಯಾಗಿ ಜಾರಿಮಾಡುವ ಸವಾಲು ಸರ್ಕಾರದ ಮುಂದಿದೆ.
ಕೋವಿಡ್ ಕಾರಣದಿಂದಾಗಿ ಆಗಿರುವ ಆರ್ಥಿಕ ದುಸ್ಥಿತಿಯ ಸನ್ನಿವೇಶವನ್ನು ಎದುರಿಸುವ ಸಲುವಾಗಿ, ವಿತ್ತೀಯ ಕೊರತೆಯನ್ನು ಶೇ.3.5ರವರೆಗೆ ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅವಕಾಶ ನೀಡಿದೆ. ಆದರೆ ಈ ಪ್ರಮಾಣವನ್ನು ಶೇ.3.26ಕ್ಕೆ ಸೀಮಿತಗೊಳಿಸುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು ಗಮನಾರ್ಹ. ಅದೇ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಹಣಕಾಸು ಸವಾಲುಗಳ ಬಗ್ಗೆಯೂ ಅವರು ಬಜೆಟ್ ಭಾಷಣದಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ. ಕೇಂದ್ರವು ರಾಜ್ಯಗಳಿಗೆ ನೀಡುತ್ತಿರುವ ಜಿಎಸ್ಟಿ ಪರಿಹಾರವು 2022ಕ್ಕೆ ಕೊನೆಯಾಗುತ್ತಿದೆ (ಪರಿಹಾರವನ್ನು ಇನ್ನೂ ಕನಿಷ್ಠ ಮೂರು ವರ್ಷ ಮುಂದುವರಿಸಬೇಕೆಂದು ಸಿಎಂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ). ಅಂದರೆ, ರಾಜ್ಯಗಳು ಸ್ವಂತ ಸಂಪನ್ಮೂಲ ಸಂಗ್ರಹವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆದರೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಪ್ರಶ್ನೆ. ಜಿಎಸ್ಟಿ ಬಂದ ನಂತರದಲ್ಲಿ ತೆರಿಗೆ ವಿಧಿಸುವ ಅವಕಾಶಗಳು ತುಂಬ ಸೀಮಿತವಾಗಿವೆ. ಅದಲ್ಲದೆ, ತೆರಿಗೆ ಹೆಚ್ಚಳ ಮಾಡಿದರೆ ಜನರು ಅಸಮಾಧಾನಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 2021-22ನೇ ಸಾಲಿನಲ್ಲಿ ನಿಯಮಾನುಸಾರ, 67,100 ಕೋಟಿ ರೂ. ಸಾಲಕ್ಕೆ ಅವಕಾಶ ಇದ್ದರೂ, ಅದನ್ನು 63,100 ಕೋಟಿ ರೂ.ಗೆ ಸೀಮಿತಗೊಳಿಸಿರುವದಾಗಿ ಸಿಎಂ ಹೇಳಿದ್ದಾರೆ. 2022-23ನೇ ಸಾಲಿನಲ್ಲಿ 72 ಸಾವಿರ ಕೋಟಿ ರೂ. ಸಾಲಕ್ಕೆ ಯೋಜಿಸಲಾಗಿದೆ. ಹಸಿರು ಬಜೆಟ್, ಮಕ್ಕಳ ಬಜೆಟ್, ಮಹಿಳಾ ಬಜೆಟ್ ಇತ್ಯಾದಿ ಪದಪುಂಜಗಳನ್ನು ಬಜೆಟ್ಪ್ರತಿಯಲ್ಲಿ ಬಳಸಲಾಗಿದೆ. ಇವಕ್ಕೆಂದು ಪ್ರತ್ಯೇಕ ಹಣ ತೆಗೆದಿರಿಸದಿದ್ದರೂ, ಆಯಾ ಇಲಾಖೆಗೆ ಒದಗಿಸುವ ಅನುದಾನದಲ್ಲಿ ಈ ವಿಷಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಸಿಎಂ ಬಜೆಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಘೋಷಣೆಗಳ ಪರಿಣಾಮಕಾರಿ ಜಾರಿ ಆಧಾರದ ಮೇಲೆ ಬಜೆಟ್ ಫಲಾಫಲ ನಿರ್ಧಾರವಾಗುತ್ತದೆ.