

ಶಿವಮೊಗ್ಗ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿದ್ದ ಮುಸ್ಲಿಮರು ಮನೆ ಹಾಗೂ ಸಮೀಪದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಮಸೀದಿಗಳಲ್ಲಿದ್ದ ಧರ್ಮಗುರುಗಳು ಹಾಗೂ ಮೌಲ್ವಿಗಳು ಸಂದೇಶ ಬೋಧಿಸಿದರು. ಪ್ರಾರ್ಥನಾ ಸ್ಥಳಗಳಲ್ಲಿ ಬಡ ಮುಸ್ಲಿಮರಿಗೆ ಉಳ್ಳವರು ದಾನ ಮಾಡುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಈದ್ಗಾ ಮೈದಾನ, ಸೋಮಿನಕೊಪ್ಪ, ನ್ಯೂ ಮಂಡ್ಲಿ, ಗೋಪಾಳ, ಅಶೋಕನಗರ ಮತ್ತಿತರೆಡೆ ಮಸೀದಿ, ದರ್ಗಾಗಳಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕ ಹಾಗೂ ತೆರೆದ ಸ್ಥಳಗಳಲ್ಲಿ, ಸಮುದಾಯ ಭವನಗಳಲ್ಲಿ ಪ್ರಾಣಿಗಳನ್ನು ಖುರ್ಬಾನಿ ಮಾಡಿದರು.
ಈದ್ಗಾ ಮೈದಾನಕ್ಕೆ ತಂಡೋಪ ತಂಡವಾಗಿ ಆಗಮಿಸಿದ್ದ ಮುಸ್ಲಿಮರು ಒಂದು ಗಂಟೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಅಪ್ಪುಗೆಯಿಂದ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಕಷ್ಟದಲ್ಲಿದ್ದವರಿಗೆ ಸಹಾಯ ನೀಡಬೇಕೆಂಬ ಸಂದೇಶವನ್ನು ಧರ್ಮಗುರುಗಳು, ಮೌಲ್ವಿಗಳು ನೀಡಿದರು. ಪ್ರಾರ್ಥನಾ ಮಂದಿರಗಳು, ಮಸೀದಿಗಳು, ಸಾರ್ವಜನಿಕ ಸ್ಥಳಗಳಲ್ಲಿದ್ದ ಬಡವರಿಗೆ ದಾನ ನೀಡಿದರು.
ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಸೋಮವಾರ ಬೆಳಗ್ಗೆ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದ ಮಸೀದಿಗಳು, ಪ್ರಾರ್ಥನ ಮಂದಿರಗಳು, ಗಾಂಧಿಬಜಾರ್, ಅಮೀರ್ ಅಹಮ್ಮದ್ ವೃತ್ತ, ರಾಗಿಗುಡ್ಡ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯಿಂದಲೇ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.