ಮೌಲ್ಯಾಧಾರಿತ ಶಿಕ್ಷಣ ಕೊಡುವುದು ಮುಖ್ಯ; ರುದ್ರಪ್ಪ ಲಮಾಣಿ

24-RNR-01
Published on

ರಾಣೆಬೆನ್ನೂರ: ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಹಾಳಾಗುತ್ತಿದೆ. ಹಿರಿಯರಾಗಿ ಕಿರಿಯರನ್ನು ಆಕರ್ಷಿಸುವ ಶಕ್ತಿ ನಮ್ಮಲ್ಲಿ ಇದ್ದರೆ ಮಾತ್ರ ಅವರು ನಮ್ಮ ಆದರ್ಶಗಳನ್ನು ಪಾಲಿಸಲು ಮುಂದಾಗುತ್ತಾರೆ ಎಂದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರದ ಕುರಿತು ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಮರೆಯದೆ ಪಾಲಿಸಬೇಕು. ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡಿದಾಗ ಸಮಾಜದಲ್ಲಿ ಉತ್ತಮ ಬದುಕು ನಿಮ್ಮದಾಗುತ್ತದೆ. ದೈಹಿಕವಾಗಿ ಬೆಳೆದಂತೆ ಮಾನಸಿಕವಾಗಿ ಬೆಳೆಯಬೇಕು. ಆರೋಗ್ಯ ಪೂರ್ಣ ರಾಷ್ಟ್ರ ನಿರ್ಮಾಣವಾಗಲು ಆಧ್ಯಾತ್ಮಿಕ ತಳಹದಿ ಇರಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನಾಗರಾಜ ಎಚ್. ಭೂಗೋಳಶಾಸ್ತ್ರದ ಇತಿಹಾಸ ಮತ್ತು ಮೂಲ ಪರಿಕಲ್ಪನೆಗಳ ಕುರಿತು ಉಪನ್ಯಾಸ ನೀಡಿದರು.
ಪ್ರಾಚಾರ್ಯ ಡಾ. ಸುರೇಶ ಬಣಕಾರ, ಉಪನ್ಯಾಸಕರಾದ ಡಾ. ಪುಷ್ಪಾಂಜಲಿ ಕಾಂಬಳೆ, ಡಾ. ಎಚ್.ಐ. ಬ್ಯಾಡಗಿ, ಎಚ್.ಎ. ಭಿಕ್ಷಾವರ್ತಿಮಠ, ರಾಜೀವ ಎಂ., ದೇವರಾಜ ಹಂಚಿನಮನಿ, ಕೆ.ಕೆ. ಹಾವಿನಾಳ, ಎಸ್.ಕೆ. ಜಡೇದ, ಆರ್. ಗೋಪಾಲರಡ್ಡಿ, ಶ್ರೀಕಾಂತ ಕುಂಚೂರು, ಎಚ್. ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net