ಹೆಂಡ್ತಿಗೆ ಬೇಲ್‌ ಸಿಕ್ರೆ, ಗಂಡನನ್ನು ಮನೆಗೆ ಕಳಿಸಿದ ಪೊಲೀಸರು! ಮುಂದೇನಾಯ್ತು?

jail
Published on

ಚೆನ್ನೈ: ಕೊಲೆ ಪ್ರಕಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ದಂಪತಿ ಪೈಕಿ ಕೋರ್ಟ್‌ ಹೆಂಡತಿಗೆ ಜಾಮೀನು ಮಂಜೂರು ಮಾಡಿದರೆ, ಪೊಲೀಸರು ಗಂಡನನ್ನು ಬಿಡುಗಡೆ ಮಾಡಿರುವ ಕುತೂಹಲದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ವೆಲ್ಲಲಪಟ್ಟಿ ಗ್ರಾಮದ ಸದಾಶಿವಂ ಎನ್ನುವವರ ಕೊಲೆ ಪ್ರಕರಣದಲ್ಲಿ ರಂಜಿತ್ ಕುಮಾರ್ ಹಾಗೂ ಆತನ ಪತ್ನಿ ಪವಿತ್ರಾ ಆರೋಪಿಗಳಾಗಿದ್ದು, ಜೈಲಿನಲ್ಲಿ ಇದ್ದಾರೆ. ಜೂನ್ 30 ರಂದು ಕೊಲೆ ಪ್ರಕರಣ ನಡೆದಿದ್ದು, ಇವರಿಬ್ಬರು ಹಾಗೂ ಕೊಲೆಗೆ ಸಹಕರಿಸಿರುವ ಆರೋಪ ಹೊತ್ತ ವಿಜಯ್ ಕುಮಾರ್ ಎಂಬಾತ ಸೇಲಂನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಈ ನಡುವೆ ಪವಿತ್ರಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾಳೆ. ಅವಳಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಈ ಪ್ರತಿಯನ್ನು ಪೊಲೀಸರಿಗೆ ನೀಡಲಾಗಿದ್ದು, ಆಕೆಯನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು.

ಆದರೆ ಜೈಲಿಗೆ ಬಂದ ಅಧಿಕಾರಿಗಳು ಪವಿತ್ರಾ ಬದಲು ಗಂಡ ರಂಜಿತ್‌ಕುಮಾರ್‌ನನ್ನು ಬಿಡುಗಡೆ ಮಾಡಿದ್ದಾರೆ. ಗಂಡ ಮನೆಗೆ ತಲುಪಿದ ಮೇಲೆ ಜಾಮೀನಿಗೆ ತಾನು ಅರ್ಜಿ ಸಲ್ಲಿಸಿದ್ದ ವಿಷಯವನ್ನು ಪವಿತ್ರಾ ಹೇಳಿದ್ದಾಳೆ.

ವಿಚಾರಣೆ ಮಾಡಿದಾಗ ಜಾಮೀನು ಪವಿತ್ರಾಳಿಗೆ ಸಿಕ್ಕಿರುವುದು ತಿಳಿದಿದೆ. ನಮಗೆ ಕನ್‌ಫ್ಯೂಸ್‌ ಆಗಿ ಆಕೆಯ ಗಂಡನನ್ನು ಬಿಡುಗಡೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ತಾವು ತಪ್ಪು ಎಸಗಿರುವುದು ತಿಳಿಯುತ್ತಲೇ ಮನೆಗೆ ಹೋಗಿ ಗಂಡನನ್ನು ಬಂಧಿಸಿ ಪುನಃ ಜೈಲಿನಲ್ಲಿ ಇಟ್ಟಿದ್ದಾರೆ. ಪವಿತ್ರಾಳನ್ನು ಬಿಡುಗಡೆ ಮಾಡಿದ್ದಾರೆ.

ಇದು ಗೊಂದಲದಿಂದ ಆಗಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಆದರೂ ನಾವು ತನಿಖೆ ನಡೆಸುತ್ತಿದ್ದೇವೆ, ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆಯೋ ಎಂಬ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಎಂದು ಜೈಲಿನ ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ತಪ್ಪು ಮಾಡಿದ್ದೇ ಆಗಿದ್ದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net