ಸೆನ್ಸಾರ್​ ಪೂರ್ಣ, ಅ.31ಕ್ಕೆ ಬಾಹುಬಲಿ: ದಿ ಎಪಿಕ್​! ಚಿತ್ರದ ರನ್​ಟೈಮ್​ ಕೇಳಿದ್ರೆ ಹುಬ್ಬೇರೋದು ಖಚಿತ | Baahubali

ವಿಜಯವಾಣಿ (67)
Published on

ಬೆಂಗಳೂರು: ಒಂದು ದಶಕದ ಹಿಂದೆ ಭಾರತೀಯ ಚಲನಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿದ ಟಾಲಿವುಡ್​ ರೆಬೆಲ್​ ಸ್ಟಾರ್ ಪ್ರಭಾಸ್​, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ​ ಅಭಿನಯದ ‘ಬಾಹುಬಲಿ’ (Baahubali) ಬಿಡುಗಡೆಯಾಗಿ ಇದೀಗ 10 ವರ್ಷಗಳು ಕಳೆದಿವೆ. ಅದ್ಭುತ ದೃಶ್ಯಗಳು, ರೋಮಾಂಚಕ ನಿರೂಪಣೆ ಮತ್ತು ಅದ್ಧೂರಿ ವಿಎಫ್​ಎಕ್ಸ್​ ತಾಂತ್ರಿಕ ಕೆಲಸಗಳ ಮೂಲಕ ಚಿತ್ರ ಸಿನಿಪ್ರಿಯರನ್ನು ಆಕರ್ಷಿಸಿತು. ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಹೊಸ ಸಂಚಲನ ಮೂಡಿಸಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ, ಚಿತ್ರದ ಎರಡು ಭಾಗಗಳನ್ನು ಒಗ್ಗೂಡಿಸಿ, ಮತ್ತೊಮ್ಮೆ ತೆರೆ ಮೇಲೆ ತರಲು ದಿನಗಣನೆ ಎಣಿಸುತ್ತಿದ್ದಾರೆ.

3 ಗಂಟೆಗೂ ಮೀರಿದ ರನ್​ಟೈಮ್​

ಬಾಹುಬಲಿ: ದಿ ಬಿಗಿನಿಂಗ್ (2015) ಮತ್ತು ಬಾಹುಬಲಿ: ದಿ ಕನ್​ಕ್ಲ್ಯೂಷನ್ (2017) ಎರಡೂ ಚಿತ್ರಗಳು ಅಂದಿನ ಮಟ್ಟಿಗೆ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸಿತು. ಈ ಎರಡರ ಕಥೆಯನ್ನು ಸೇರಿಸಿ, 'ಬಾಹುಬಲಿ: ದಿ ಎಪಿಕ್' ಎಂಬ ಶೀರ್ಷಿಕೆಯಡಿ ಮತ್ತೊಮ್ಮೆ ಸಿನಿಮಾವನ್ನು ಬೆಳ್ಳಿಪರದೆಯ ಮೇಲೆ ತರುತ್ತಿರುವ ರಾಜಮೌಳಿ, ಸಿನಿಪ್ರಿಯರೊಂದಿಗೆ ತಮ್ಮ ಸಂಭ್ರಮವನ್ನು ಆಚರಿಸಲು ಈ ಮೂಲಕ ಎದುರುನೋಡುತ್ತಿದ್ದಾರೆ. ಈಗಾಗಲೇ ಚಿತ್ರದ ರಿ-ಎಡಿಟಿಂಗ್ ಮತ್ತು ರಿ-ಮಾಸ್ಟರಿಂಗ್​ ಕಟ್ಸ್​ಗಳು ಸಂಪೂರ್ಣವಾಗಿದ್ದು, ಸೆನ್ಸಾರ್​ ಕೆಲಸಗಳು ಪೂರ್ಣಗೊಂಡಿವೆ.

ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯು/ಎ ಪ್ರಮಾಣಪತ್ರ ನೀಡಿದ್ದು, ಸಿನಿಮಾದ ಒಟ್ಟು ರನ್​ಟೈಮ್​ ಬರೋಬ್ಬರಿ 3 ಗಂಟೆ 44 ನಿಮಿಷಗಳು ಎಂಬುದು ಸದ್ಯ ಯೋಚಿಸಬೇಕಾದ ವಿಷಯವೇ. ಪ್ರಸ್ತುತ, ಅತಿ ಹೆಚ್ಚು ಸಮಯದ ರನ್​ಟೈಮ್​ ಇದಾಗಿದ್ದು, ದೀರ್ಘ ಸಮಯದವರೆಗೂ ಸೀಟಿನಲ್ಲಿ ಕುಳಿತು ಚಿತ್ರ ವೀಕ್ಷಿಸುವುದು ಸಿನಿಪ್ರಿಯರಿಗೆ ಕೊಂಚ ಸವಾಲು ಎಂದೇ ಹೇಳಬಹುದು. ಸೆನ್ಸಾರ್​ ಕುರಿತಂತೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. 'ಬಾಹುಬಲಿ: ದಿ ಎಪಿಕ್'​ ಇದೇ ಅಕ್ಟೋಬರ್​ 31ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ಸ್ಟಾರ್​ ಕಲಾವಿದರ ತಾರಾಗಣವಿದೆ. ಎಂಎಂ ಕೀರವಾಣಿಯವರ ಸಂಗೀತದೊಂದಿಗೆ, ಚಿತ್ರವು ರೀ-ರಿಲೀಸ್ ಆಗುತ್ತಿದೆ. ಅ.31ರಂದು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಐಮ್ಯಾಕ್ಸ್, ಡಾಲ್ಬಿ ಸಿನಿಮಾ, 4ಡಿಎಕ್ಸ್, ಡಿ-ಬಾಕ್ಸ್ ಮತ್ತು ಇಪಿಕ್ಯು ಸೇರಿದಂತೆ ಬಹು ಪ್ರೀಮಿಯಂ ಫಾರ್ಮೆಟ್​ಗಳಲ್ಲಿ ಬಿಡುಗಡೆಗೊಳ್ಳಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net