ಬಾಹುಬಲಿ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ

IMG-20250402-WA0141
ಶ್ರವಣಬೆಳಗೊಳದಲ್ಲಿ ಬುಧವಾರ ರಾತ್ರಿ ಸುವರ್ಣ ರಥದಲ್ಲಿ ಬಾಹುಬಲಿ ಸ್ವಾಮಿಯ ಭವ್ಯ ಮೆರವಣಿಗೆ ನಡೆಸಲಾಯಿತು.
Published on

ಶ್ರವಣಬೆಳಗೊಳ: ಇಲ್ಲಿನ ವಿಂಧ್ಯಗಿರಿ ಬಾಹುಬಲಿ ಮೂರ್ತಿಯ 1044ನೇ ಪ್ರತಿಷ್ಠಾಪನಾ ಮಹೋತ್ಸವವು ಬುಧವಾರ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಬಾಹುಬಲಿಯ ಸನ್ನಿಧಿಯಲ್ಲಿ ಅನೇಕ ಮಂಗಲ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ಎಳನೀರು, ಕಬ್ಬಿನಹಾಲು, ವಿವಿಧ ಹಣ್ಣುನುಗಳ ರಸ, ಕ್ಷೀರ, ಕಲ್ಕಚೂರ್ಣ, ಅರಿಶಿಣ, ಕಷಾಯಗಳಿಂದ ಅಭಿಷೇಕ ನೆರವೇರಿಸಿ ಚತುಷ್ಕೋನ ಕಲಶಗಳಿಂದ ಅಭಿಷೇಕ ಮಾಡಲಾಯಿತು. ನಂತರ ರಕ್ತಚಂದನ, ಅಷ್ಟಗಂಧ, ಕೇಸರಿ, ಅಭಿಷೇಕ ನೆರವೇರಿಸಿ ಪುಷ್ಪವೃಷ್ಠಿಗಳೊಂದಿಗೆ ಮಹಾಶಾಂತಿಧಾರಾ ಮಾಡಲಾಯಿತು.

ಆಗಮಿಸಿದ್ದ ಸುಮಂಗಲಿಯರು 108 ಅರ್ಘ್ಯ 108 ದ್ರವ್ಯಗಳನ್ನು ಸ್ವಾಮಿಯ ಪಾದಗಳಿಗೆ ಅರ್ಪಿಸಿದರು. ಅರ್ಘ್ಯಗಳೊಂದಿಗೆ ಮಹಾಮಂಗಳಾರತಿ ಮಾಡಿ ಶ್ರಾವಕ ಶ್ರಾವಕಿಯರಿಗೆ ಗಂಧೋದಕ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರದ ಶ್ರೀಗಳು ಪೀಠಾರೋಹಣ ಮಾಡಿದಾಗ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳು ಭಕ್ತರನ್ನುದ್ದೇಶಿಸಿ ಪ್ರವಚನ ನೀಡಿ, ಮನುಷ್ಯ ಜನ್ಮದಲ್ಲಿ ಮಾಡಿದ ಸಾಕಷ್ಟು ಪಾಪ-ಕರ್ಮಗಳನ್ನು ತೊಳೆಯಬೇಕಾದರೆ ಪ್ರತಿಯೊಬ್ಬರೂ ದೇವ ಗುರು ಶಾಸ್ತ್ರಗಳನ್ನು ಆರಾಧಿಸಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಯಾವುದೇ ತರಹದ ಭೇದ-ಭಾವ ಮಾಡದೇ ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ಧರ್ಮೋಪದೇಶ ನೀಡಿದರು. ಸುತ್ತಾಲಯವನ್ನು ವಿವಿಧ ಪುಷ್ಪ ಮತ್ತು ಧರ್ಮಧ್ವಜಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net