ಹನೂರು : ಉತ್ತಮ ಮಳೆಯಿಂದಾಗಿ ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿ ಕೆರೆ ಭರ್ತಿಯಾದ ಹಿನ್ನಲೆಯಲ್ಲಿ ಶುಕ್ರವಾರ ಗ್ರಾಮಸ್ಥರು ಭಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮದ ಶಂಕರ್ ಎಂಬುವರು ಮಾತನಾಡಿ, ಈ ವರ್ಷ ಮಳೆಯಿಲ್ಲದ ಪರಿಣಾಮ ಆರ್.ಎಸ್ ದೊಡ್ಡಿ ಸೇರಿದಂತೆ ತಾಲೂಕಿನ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದವು. ಅಂತರ್ಜಲ ಮಟ್ಟ ಕುಸಿತದ ಪರಿಣಾಮ ಜನರು ಕುಡಿಯುವ ನೀರಿಗಾಗಿ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜತೆಗೆ ಕೃಷಿಗೆ ಹಿನ್ನಡೆಯಾಗಿದ್ದು, ಬರಗಾಲ ಎದುರಾಗಿದೆ. ಜನರು ಮಳೆಗಾಗಿ ಎದುರು ನೋಡುತ್ತಿದ್ದರು. ಈಗೀರುವಾಗ 3 ದಿನಗಳ ಕಾಲ ಸುರಿದ ಜೋರು ಮಳೆಗೆ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಕೆರೆ ಪ್ರತಿ ವರ್ಷವೂ ತುಂಬಿರಲಿ. ಇದರಿಂದ ಗ್ರಾಮವು ಸಮೃದ್ಧಿಯಿಂದ ಕೂಡಿರುತ್ತದೆ. ಇನ್ನು ಉತ್ತಮ ಮಳೆಯಿದಾಗಿ ತಾಲೂಕಿನ ಕೆರೆ, ಕಟೆಗಳ್ಳಲ್ಲೂ ನೀರು ಸಂಗ್ರಹವಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಿಸಲಿದೆ. ಜನ, ಜಾನುವಾರುಗಳ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಅನುಕೂಲವಾಗಲಿದೆ. ವರುಣ ಮುನಿಸು ತೋರದೇ ಪ್ರತಿ ವರ್ಷ ಉತ್ತಮ ಮಳೆ ಸುರಿಸಿ ಉತ್ತಮ ಬೆಳೆಯಾಗಲಿ ಎಂದರು.
ಸಂದರ್ಭದಲ್ಲಿ ಅರ್ಚಕ ಪ್ರಭುಸ್ವಾಮಿ, ಮುಖಂಡರಾದ ಶಿವಲಿಂಗಪ್ಪ, ನಂಜುಂಡಪ್ಪ, ಕುಮಾರಸ್ವಾಮಿ, ನಾಗಲಿಂಗಚಾರಿ, ಅರ್ಜುನ್, ರಂಗಸ್ವಾಮಿ, ನಾಗಣ್ಣಚಾರಿ, ಕಾಮಶೆಟ್ಟಿ, ಜಯರಾಜು, ಜಡೇಸ್ವಾಮಿ, ಮಹದೇವಶೆಟ್ಟಿ, ಭಾಗ್ಯಮ್ಮ ಹಾಗೂ ಇನ್ನಿತರರಿದ್ದರು.