

ರಾಣೆಬೆನ್ನೂರ: ತಾಲೂಕಿನಲ್ಲಿ ಬಗರಹುಕುಂ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಕಾರ್ಯಕರ್ತರು ಸೋಮವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಬಗರಹುಕುಂ ಸಾಗುವಳಿ ಮಾಡುತ್ತಿರುವ 740 ರೈತರು ಜಮೀನುಗಳನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ರೈತರು ಜಮೀನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಸಕ್ರಮಗೊಳಿಸಿ ರೈತರಿಗೆ ಪಟ್ಟ ವಿತರಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಮೂಲಕ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ರಮೇಶ ಪೂಜಾರ, ನಾಗರಾಜ ಪೂಜಾರ, ಬಸವರಾಜ ಬೇವಿನಹಳ್ಳಿ, ಪ್ರವೀಣ ಅಸುಂಡಿ, ಹೊನ್ನಪ್ಪ ಹಳ್ಳಿ, ಮಾಲತೇಶ ಕುಸೂರ, ಬಸಪ್ಪ ಕೆಳಗಿನಮನಿ, ಶಿವಾನಂದ ಕಟ್ಟಿಮನಿ, ಜಯಪ್ಪ ರಟ್ಟಿಹಳ್ಳಿ, ಶಿವನಗೌಡ ಪಾಟೀಲ, ಕುಮಾರಸ್ವಾಮಿ ಯೋಗಿ ಮತ್ತಿತರರು ಪಾಲ್ಗೊಂಡಿದ್ದರು.