ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯಿರಿ

BKT 251
Published on

ಬಾಗಲಕೋಟೆ: ಕೋವಿಡ್ ಸೋಂಕು ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಇದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹೋಳಿ ಹಬ್ಬದ ರಜೆ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳಬಾರದು. ಮನೆಯಲ್ಲಿ ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ಹೊರ ರಾಜ್ಯದಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಡಿ ಭಾಗದಲ್ಲಿ, ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಯಲಿದೆ. ಸುರಕ್ಷತೆ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ವ್ಯಾಕ್ಸಿನ್ ನೀಡಲಾಗುತ್ತದೆ. ಸಾರ್ವಜನಿಕರು ಕೂಡ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗಾಗಿ 8.7 ಕೋಟಿ ರೂ. ಖರ್ಚು ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುಮತಿ ನೀಡಿರುವ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಎರಡು ಮಾದರಿಯ ವ್ಯಾಕ್ಸಿನ್ ಲಭ್ಯವಿದೆ. ಪ್ರತಿನಿತ್ಯ 87000 ಜನರಿಗೆ ವ್ಯಾಕ್ಸಿನ್ ನೀಡುವ ಗುರಿ ಇದೆ. ನಾವು 9000 ಸಾವಿರಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡುತ್ತಿದ್ದೇವೆ. 13 ಸಾವಿರ್ ವ್ಯಾಕ್ಸಿನ್ ಇದ್ದವು, ಗುರುವಾರ ಮತ್ತೆ 20 ಸಾವಿರ ಡೋಸ್ ಬಂದಿವೆ. ಪ್ರತಿನಿತ್ಯ 3600 ಸ್ಯಾಂಪಲ್‌ಗಳ ಪರೀಕ್ಷೆ ಸಾಮರ್ಥ್ಯವಿದೆ. ಡಾಟಾ ಎಂಟ್ರಿ ಕಷ್ಟವಾಗಿದ್ದರಿಂದ ಹೆಚ್ಚುವರಿ ಸಿಬ್ಬಂದಿ ನಿಯುಕ್ತಿಗೊಳಿಸಲು ಆದೇಶಿಸಲಾಗಿದೆ ಎಂದರು.

ನಿಯಂತ್ರಣಕ್ಕೆ ಕ್ರಮ
ಕೋವಿಡ್ ಎರಡನೇ ಅಲೆಯ ಅಪಾಯ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅನೇಕ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 1077 ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ 13860 ಪಾಸಿಟಿವ್, 410311 ನೆಗೆಟಿವ್ ಪ್ರಕರಣ ಕಂಡು ಬಂದಿವೆ. 1893 ಪರೀಕ್ಷೆಗಳ ಫಲಿತಾಂಶ ನಿರೀಕ್ಷಿಸಲಾಗುತ್ತದೆ. 55 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಕಳೆದ ಏಳು ದಿನಗಳಲ್ಲಿ 15290 ಮಾದರಿ ಪರೀಕ್ಷಿಸಲಾಗಿದ್ದು, ಈ ಪೈಕಿ 50 ಪಾಸಿಟಿವ್ ಕಂಡು ಬಂದಿದೆ. 18 ಸೋಂಕಿತರು ಗುಣಮುಖರಾಗಿದ್ದಾರೆ. ಮೃತ ಪ್ರಕರಣಗಳು ವರದಿಯಾಗಿಲ್ಲ. ಫೆಬ್ರವರಿಯಲ್ಲಿ 18, ಮಾರ್ಚ್‌ನಲ್ಲಿ 81 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ ಎಂದು ತಿಳಿಸಿದರು.

ನಗರದ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಹೋದಲ್ಲಿ 250 ರೂ., ಗ್ರಾಮೀಣ ಪ್ರದೇಶದಲ್ಲಿ 100 ರೂ.ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ತಂಡಗಳನ್ನು ರಚನೆ ಮಾಡಲಾಗಿದೆ. ಕೋವಿಡ್ ಲಸಿಕೆ ಸಮರ್ಪಕವಾಗಿ ನೀಡಲಾಗುತ್ತಿದೆ. ಸಾರ್ವಜನಿಕ ಮದುವೆ, ಜನ್ಮದಿನ, ಶವ ಸಂಸ್ಕಾರ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಜನ ಸೇರಬೇಕು. ಹೆಚ್ಚು ಸೇರ್ಪಡೆಗೊಂಡಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಪಂ ಸಿಇಒ ಟಿ.ಭೂಬಾಲನ್, ಡಿಎಚ್‌ಒ ಡಾ.ಅನಂತ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿ 80 ಬೆಡ್
ಕೋವಿಡ್ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸಜ್ಜುಗೊಳಿಸಲಾಗಿದೆ. 400 ಹಾಸಿಗೆಗಳು, 33 ವೆಂಟಿಲೇಟರ್, 40 ಐಸಿಯು, 270 ಆಕ್ಸಿಜನ್ ಲಭ್ಯವಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡಲಾಗುವುದು. ಕೋವಿಡ್‌ಗಾಗಿ 80 ಬೆಡ್ ಒಳಗೊಂಡ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‌ಗೆ ವಸತಿ ನಿಲಯಗಳನ್ನು ಗುರಿತಿಸಲಾಗಿದೆ. ಕೋವಿಡ್ ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಕಂಟೋನ್ಮೆಂಟ್ ಜೋನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದರು.

ಹೋಳಿ ಸಂದರ್ಭದಲ್ಲಿ ಬಾಗಲಕೋಟೆ ನಗರ ಸೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹೆಚ್ಚು. ಅದರಲ್ಲೂ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ ಹೋಗುವ ಸಂಖ್ಯೆ ಅಧಿಕ. ಕೋವಿಡ್ ಹಿನ್ನೆಲೆಯಲ್ಲಿ ಯಾರೂ ಪ್ರವಾಸ ಕೈಗೊಳ್ಳಬಾರದು. ಸರ್ಕಾರದ ಮಾರ್ಗಸೂಚಿ ಅನ್ವಯ ಸಭೆ, ಸಮಾರಂಭ ನಡೆಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಜಾಗೃತಿ ವಹಿಸಬೇಕು.
- ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net