ಕರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ

BKT 181
Published on

ಬಾಗಲಕೋಟೆ: ಇಂಧನ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ವಿದ್ಯಾಗಿರಿಯ ಅಕ್ಕಿಮರಡಿ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ಅಭಿಯಾನದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ವೈ.ಮೇಟಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿದೆ. ಪೆಟ್ರೋಲ್ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಜನರ ನೋವಿಗೆ ದನಿಯಾಗಲು ಕಾಂಗ್ರೆಸ್ ಹೋರಾಟ ಪ್ರಾರಂಭಿಸಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ರಾಜ್ಯ ಬಿಜೆಪಿಯೊಳಗಿನ ಒಳಜಗಳದಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದು ಅರಾಜಕತೆ ಸೃಷ್ಟಿಯಾಗಿದೆ. ಎರಡು ದಿನಗಳಿಂದ ವಿಧಾನಸೌಧ ಆಡಳಿತ ಕೆ.ಕೆ. ಗೆಸ್ಟ್‌ಹೌಸ್ ಮತ್ತು ಬಿಜೆಪಿಯ ಕಚೇರಿಗೆ ಸ್ಥಳಾಂತರಗೊಂಡಂತೆ ಕಾಣುತ್ತಿದೆ. ಕಚೇರಿಯಲ್ಲಿ ಸಚಿವರಿಲ್ಲ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ. ಕರೊನಾ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಜನರ ಗೋಳನ್ನು ಕೇಳುವವರೇ ಇಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹದ್ಲಿ, ಆನಂದ ಶಿಲ್ಪಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬುಶಮಾ ಖಾಜಿ, ಮುಖಂಡರಾದ ಎಂ.ಎಲ್.ಶಾಂತಗಿರಿ, ನಿಂಗನಗೌಡ ಪಾಟೀಲ, ಸಿದ್ದಣ್ಣ ಗೋಡಿ, ಮುತ್ತು ಜೋಳದ, ಉಮೇಶ ಮೇಟಿ, ಪೀರಪ್ಪ ಮ್ಯಾಗೇರಿ, ಹಾಜಿಸಾಬ ದಂಡಿನ, ಚೆನ್ನವೀರ ಅಂಗಡಿ, ಮಂಜುಳಾ ಭೂಸಾರೆ, ರೇಣುಕಾ ನ್ಯಾಮಗೌಡ, ಬಸವರಾಜ ಹೊನರಳ್ಳಿ ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net