

ಶಿವಮೊಗ್ಗ: ಯುವನಿಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ.12ರಂದು ಬೆಳಗ್ಗೆ 6ರಿಂದ ಸಂಜೆ 6.30ರವರೆಗೆ ಸಾರ್ವಜನಿಕರ ವಾಹನಗಳಿಗೆ ಮಾರ್ಗ ಬದಲಾವಣೆ ಮತ್ತು ಯುವನಿಧಿಗೆ ಬರುವ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗಗಳ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.
ತೀರ್ಥಹಳ್ಳಿ ಭಾಗದಿಂದ ಆಗಮಿಸುವ ವಾಹನಗಳು ನ್ಯೂಮಂಡ್ಲಿ-ಗೋಪಾಳ ಸರ್ಕಲ್-ಆಲ್ಕೊಳ ಸರ್ಕಲ್ ಮೂಲಕ ಎಪಿಎಂಸಿಗೆ ಬರುವುದು, ಸಾಗರ, ಹೊಸನಗರ ಭಾಗಗಳಿಂದ ಆಗಮಿಸುವ ವಾಹನಗಳು ವಿನೋಬನಗರ ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿ ಸೋಮಿನಕೊಪ್ಪ ಆದರ್ಶನಗರ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಬೇಕಾಗುತ್ತದೆ ಎಂದರು.
ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಹಾಗೂ ಹೊನ್ನಾಳಿ, ಹರಿಹರ, ದಾವಣಗೆರೆ ಹಾವೇರಿ ಭಾಗಗಳ ವಾಹನಗಳು ಬಸವಗಂಗೂರು ಮಾರ್ಗವಾಗಿ ಬಂದು ಬೊಮ್ಮಮನಕಟ್ಟೆಯ ಎಸ್‌ಎಲ್ಕೆ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಬೇಕು. ಭದ್ರಾವತಿ, ಚಿಕ್ಕಮಗಳೂರು, ಎನ್.ಆರ್.ಪುರ-ಕೊಪ್ಪ ಭಾಗಗಳ ವಾಹನಗಳು ಬೈಪಾಸ್, ನ್ಯೂಮಂಡ್ಲಿ ವೃತ್ತ, ಗೋಪಾಳ ವೃತ್ತ, ಆಲ್ಕೊಳ ವೃತ್ತದ ಮೂಲಕ ಎಪಿಎಂಸಿಗೆ ತೆರಳಿ ನಿಲುಗಡೆ ಮಾಡುವುದು. ಹೊಳೆಹೊನ್ನೂರು-ಚನ್ನಗಿರಿ-ಚಿತ್ರದುರ್ಗದ ಭಾಗಗಳ ವಾಹನಗಳು ಶಂಕರಮಠ ವೃತ್ತ, ಕೆಇಬಿ ವೃತ್ತ, ರೈಲ್ವೆ ನಿಲ್ದಾಣದ ರಸ್ತೆ ಮಾರ್ಗವಾಗಿ ಬಂದು ಎನ್‌ಇಎಸ್ ಮೈದಾನ, ಶೇಷಾದ್ರಿಪುರಂ ಗೂಡ್ಸ್ ಶೇಡ್, ಸೈನ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕಾಗುತ್ತದೆ. ಕಾರ್ಯಕ್ರಮ ಮುಕ್ತಾಯದ ಬಳಿಕ ಸಾರ್ವಜನಿಕರು ವಾಹನಗಳ ನಿಲುಗಡೆ ಸ್ಥಳಗಳಿಗೆ ತೆರಳಬೇಕಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಆಲ್ಕೋಳ ವೃತ್ತದಿಂದ ಪೊಲೀಸ್ ಚೌಕಿ-ಉಷಾ ನರ್ಸಿಂಗ್ ಹೋಮ್, ಸರ್ಕಿಟ್‌ಹೌಸ್ ವೃತ್ತದಿಂದ ಜೈಲ್ ವೃತ್ತ-ಲಕ್ಷ್ಮೀ ಟಾಕೀಸ್, ಎಂಆರ್‌ಎಸ್ ವೃತ್ತದಿಂದ ಬೈಪಾಸ್ ರಸ್ತೆ-ಸಂದೇಶ್ ಮೋಟಾರ್ಸ್-ಅಶೋಕವೃತ್ತ, ರಾಜ್‌ಕುಮಾರ್ ವೃತ್ತದಿಂದ ಮೇದಾರಿ ಕೇರಿ ರಸ್ತೆ-ಬೊಮ್ಮನಕಟ್ಟೆ ರೈಲ್ವೆ ಗೇಟ್, ವಿನೋಬನಗರ ಪೊಲೀಸ್ ಚೌಕಿಯಿಂದ ರೈಲ್ವೆ ಟ್ರಾೃಕ್ ಪಕ್ಕದ ಶನೇಶ್ಚರ ದೇವಸ್ಥಾನ ರಸ್ತೆ-ಬೊಮ್ಮನಕಟ್ಟೆ ರೈಲ್ವೆವರೆಗಿನ ಎರಡೂ ಬದಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗುತ್ತಿದೆ ಎಂದರು.