

ಬೆಂಗಳೂರು: ‘ಪರೋಲ್’,‘ಅಮೃತವಾಣಿ’,‘ಬರ್ಫಿ’ ಚಿತ್ರಗಳ ನಿರ್ದೇಶಕ ಬಿ.ಆರ್.ರಾಜಶೇಖರ್ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಬ್ಯಾಕ್ ಬೆಂಚರ್ಸ್’. ಕಾಲೇಜು ವಿದ್ಯಾರ್ಥಿಗಳ ಜೀವನದ ಕುರಿತ ಈ ಹಾಸ್ಯ ಪ್ರಧಾನ ಚಿತ್ರ ಇದೇ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಸುಚೇಂದ್ರ ಪ್ರಸಾದ್, ಜತಿನ್ ಆರ್ಯನ್, ಅರವಿಂದ ಕುಪ್ಲಿಕರ್, ವಿಜಯ್ ಪ್ರಸಾದ್, ಆಕಾಶ್, ಚತುರ್ಥಿ ರಾಜ್, ಮಾನ್ಯಗೌಡ, ಅನುಷಾ, ಕುಂಕುಮ್ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಪ್ರೋಮೋಗಳು ರಿಲೀಸ್ ಆಗಿದ್ದು, ಕಾಮಿಡಿ ಕಚಗುಳಿ ಇಡುವಲ್ಲಿ ಚಿತ್ರತಂಡ ಸಕ್ಸಸ್ ಆಗಿದೆ. ನಿರ್ದೇಶಕ ರಾಜಶೇಖರ್, ‘‘ಬ್ಯಾಕ್ ಬೆಂಚರ್ಸ್’ ವಿಭಿನ್ನ ಎನ್ನುವುದಕ್ಕಿಂತ ಸರಳ ಕಥೆ. ಪ್ರತಿಯೊಬ್ಬರನ್ನು ತಮ್ಮ ಕಾಲೇಜು ದಿನಗಳಿಗೆ ಕರೆದುಕೊಂಡು ಹೋಗುವ ಪ್ರಯತ್ನವಿದು. ಇಲ್ಲಿ ಕಾಮಿಡಿ, ಲವ್, ಎಮೋಷನ್ ಹೀಗೆ ನಾನಾ ಸಂಗತಿಗಳನ್ನು ಕಾಣಬಹುದು. ಬೆಂಗಳೂರು, ಚನ್ನಪಟ್ಟಣ ಹಾಗೂ ಚಿಕ್ಕಮಗಳೂರು ಸೇರಿ ವಿವಿಧೆಡೆ 35 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ರಾಜಶೇಖರ್.
ಒಂದು ವರ್ಷ ತರಬೇತಿ:
ಚಿತ್ರಕ್ಕಾಗಿ ಆಡಿಷನ್ ನಡೆಸಿದ ಬಗ್ಗೆ ಮಾಹಿತಿ ನೀಡುವ ರಾಜಶೇಖರ್, ‘ವಿದ್ಯಾರ್ಥಿಗಳ ಕಥೆಯಾಗಿರುವುದರಿಂದ 20ರಿಂದ 23 ವರ್ಷದೊಳಗಿನ ಪ್ರತಿಭಾವಂತ ಯುವಕರಿಗೆ ಹುಡುಕಾಟ ನಡೆಸಿ, ಸುಮಾರು 700 ಮಂದಿಗೆ ಆಡಿಷನ್ ಮಾಡಲಾಯಿತು. ಆಯ್ಕೆಯಾದ 15 ಮಂದಿಗೆ ಒಂದು ವರ್ಷ ವರ್ಕ್‌ಶಾಪ್ ಮೂಲಕ ತರಬೇತಿ ನೀಡಲಾಗಿದೆ. ಕಾಲೇಜು ದಿನಗಳ ಅನುಭವ, ತರಲೆ ಹೀಗೆ ಎಲ್ಲವನ್ನೂ ಕಲಾವಿದರಿಂದಲೇ ಕೇಳಿ ಅವುಗಳನ್ನೇ ಚಿತ್ರಕಥೆಯಲ್ಲಿ ಸೇರಿಸಲಾಗಿದೆ. ಬಳಿಕ ಮೊಬೈಲ್ ಕ್ಯಾಮರಾದ ಮೂಲಕ ಶೂಟಿಂಗ್ ನಡೆಸಿ, ಆ್ಯಕ್ಟಿಂಗ್ ಮಾಡಿಸಲಾಯಿತು. ಇದು ಚಿತ್ರದ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ನೈಜತೆ ಬರಲು ಸಾಧ್ಯವಾಗಿದೆ’ ಎನ್ನುತ್ತಾರೆ.
ಕೊನೆಯ ಬೆಂಚಿನ ಮುಗ್ಧರು:
ಕಾಲೇಜಿನ ‘ಬ್ಯಾಕ್ ಬೆಂಚರ್ಸ್’ ಏಕೆ ಸಿನಿಮಾದ ಕಥೆಯಾದರೂ ಎಂಬುದಕ್ಕೆ ರಾಜಶೇಖರ್, ‘ಇಡೀ ವಿದ್ಯಾರ್ಥಿ ಜೀವನದ ಅನುಭವಗಳು ಇರುವುದೇ ಲಾಸ್ಟ್ ಬೆಂಚಿನವರಲ್ಲಿ. ಕಾಲೇಜಿನ ಯಾವುದೇ ಚಟುವಟಿಕೆ ಇರಲಿ ಅವರು ನೇರವಾಗಿ ಮಾಡುವುದಿಲ್ಲ. ಬದಲಾಗಿ ಅದಕ್ಕೊಂದು ಅಡ್ಡಮಾರ್ಗ ಹುಡುಕುತ್ತಾರೆ. ಏನೋ ಮಾಡಲು ಹೋಗಿ, ಏನೋ ಆಯಿತು ಎನ್ನುತ್ತಾರಲ್ಲ, ಹಾಗೆಯೇ ಇವರು ಮಾಡುವ ಪ್ರತಿ ಕೆಲಸಗಳು ಎಡವಟ್ಟಿಗೆ ದಾರಿ ಮಾಡಿಕೊಡುತ್ತವೆ. ಇದರಿಂದ ಹೇಗೆ ಹೊರಬರುತ್ತಾರೆ ಎಂಬುದೇ ಚಿತ್ರದ ಕಥೆ’ ಎಂದು ಮಾಹಿತಿ ನೀಡುತ್ತಾರೆ.