

ಬೆಂಗಳೂರು: ‘ಪರೋಲ್’,‘ಅಮೃತವಾಣಿ’,‘ಬರ್ಫಿ’ ನಿರ್ದೇಶಕ ಬಿ.ಆರ್.ರಾಜಶೇಖರ್ ಆ್ಯಕ್ಷನ್-ಕಟ್ ಹೇಳಿರುವ ‘ಬ್ಯಾಕ್ ಬೆಂಚರ್ಸ್’ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್, ಪ್ರೋಮೊ ಹಾಗೂ ಸಾಂಗ್‌ಗಳ ಮೂಲಕ ಸದ್ದು ಮಾಡಿರುವ ಈ ಚಿತ್ರದಲ್ಲಿ ನಾಲ್ವರು ಉದಯೋನ್ಮುಖ ನಟ-ನಟಿಯರು ಅಭಿನಯಿಸಿದ್ದಾರೆ. ಈ ಪೈಕಿ ಇಬ್ಬರು ನಟಿಯರಾದ ಮಾನ್ಯ ಗೌಡ ಹಾಗೂ ಕುಂಕುಮ್ ಹರಿಹರ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನಟನೆಗೆ ‘ಮಾನ್ಯ’ಳಾದೆ !
‘ಬ್ಯಾಕ್ ಬೆಂಚರ್ಸ್’ನಲ್ಲಿ ಮಾಯಾ ಪಾತ್ರದಲ್ಲಿ ಮಿಂಚಿರುವ ಮಾನ್ಯ ಗೌಡ, ‘ನಾನು ಶಾಲಾ-ಕಾಲೇಜು ದಿನಗಳಲ್ಲಿ ಕೂಡ ಲಾಸ್ಟ್ ಬೆಂಚ್‌ನಲ್ಲಿ ಕೂರುತ್ತಿದ್ದೆ. ಹಾಗೆಯೇ ಈ ಸಿನಿಮಾದಲ್ಲಿ ಕೂಡ ಬ್ಯಾಕ್ ಬೆಂಚಿನ ಸ್ಟೂಡೆಂಟ್. ಇಂಜಿನಿಯರಿಂಗ್ ಮುಗಿದ ಬಳಿಕ ಆಡಿಷನ್‌ಗೆ ಕರೆ ಬಂತು. ನಾಟಕ, ಕ್ಲಾಸಿಕಲ್ ನೃತ್ಯದ ಅನುಭವ ಇದ್ದರಿಂದ ನನ್ನನ್ನು ಆಯ್ಕೆ ಮಾಡಿದರು. ಬಳಿಕ ಸಿನಿಮಾಕ್ಕಾಗಿ ಒಂದು ವರ್ಷ ವರ್ಕ್‌ಶಾಪ್ ನಡೆಸಲಾಯಿತು. ನನ್ನದು ತುಂಬಾ ಮಾರ್ಡನ್ ಹುಡುಗಿಯ ಪಾತ್ರ. ಬಜಾರಿ ಜತೆಗೆ ಆಧುನಿಕ ಗೆಟಪ್ ನನ್ನದು’ ಎನ್ನುತ್ತಾರೆ. ‘ನಾನು ಈ ಹಿಂದೆ ‘ಮಾನ್ಸೂನ್ ರಾಗ’ ಹಾಗೂ ‘ವೀರಂ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಸಿಕೊಂಡಿದ್ದೆ. ಆದರೆ ಲೀಡ್ ರೋಲ್ ಇದೇ ಮೊದಲು. ‘ಬ್ಯಾಕ್ ಬೆಂಚರ್ಸ್’ ಬಳಿಕ ನನಗೆ ಹಲವು ಅವಕಾಶಗಳು ಬಂದಿವೆ. ರಂಗಶೇಖರ್ ನಿರ್ದೇಶನದ ‘ಮುಕ್ತ ಮನಸ್ಸು’ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಜತೆಗೆ ತೆಲುಗಿನ ‘ಮಿಸಸ್ ಕರ್ನಲ್’ ಎಂಬ ಚಿತ್ರದಲ್ಲಿ ಅವಕಾಶ ಬಂದಿದೆ. ಅದಕ್ಕಾಗಿ ತೆಲುಗು ಕಲಿತಿದ್ದೇನೆ. ಕನ್ನಡ ಸೇರಿ ಬೇರೆ ಭಾಷೆಗಳಲ್ಲೂ ಎರಡು-ಮೂರು ಸಿನಿಮಾಗಳು ಮಾತುಕತೆಯ ಹಂತದಲ್ಲಿವೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮಾನ್ಯ.
ನನ್ನ ಕಾಲೇಜು ದಿನಗಳಲ್ಲಿ ಕಳೆದುಕೊಂಡ ಕ್ಷಣಗಳನ್ನು ಈ ಸಿನಿಮಾದ ಮೂಲಕ ಪಡೆದುಕೊಂಡೆ. ನನ್ನದು ಕಾಮಿಕಲ್ ಕ್ಯಾರಕ್ಟರ್. ‘ಬ್ಯಾಕ್ ಬೆಂಚರ್ಸ್’ ಎಂದರೆ ಶುದ್ಧ ತರಲೆಗಳು, ಉಡಾಳರು ಎಂಬ ಮನೋಭಾವ ದೂರ ಮಾಡುವುದು ಈ ಸಿನಿಮಾದ ಉದ್ದೇಶ.
ಮಾನ್ಯ ಗೌಡ, ನಟಿ
ಸೋತು, ಗೆದ್ದ ಕುಂಕುಮ್
ಮೊದಲ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿ ಬಳಿಕ ಆಯ್ಕೆಯಾದ ಕುಂಕುಮ್ ಹರಿಹರ, ‘ನನ್ನದು ನಿಶಾ ಎಂಬ ಪಾತ್ರ. ಕಾಲೇಜಿನ ಸೀನಿಯರ್‌ಗಳಿಗೆ ಇಷ್ಟವಾಗುವ ಜೂನಿಯರ್. ತುಂಬಾ ಮುಗ್ಧ ಹಾಗೂ ಭಾವನಾತ್ಮಕ ಅಂಶಗಳು ಪಾತ್ರದಲ್ಲಿವೆ. ಬಿಬಿಎ ಓದುವಾಗ ಆಡಿಷನ್ ನೀಡಿದ್ದೆ. ಆದರೆ, ಚಿಕ್ಕ ವಯಸ್ಸಿನವಳು ಎಂಬ ಕಾರಣಕ್ಕೆ ಮೊದಲು ರಿಜೆಕ್ಟ್ ಮಾಡಿದ್ದರು. ಗುಂಗುರು ಕೂದಲು ಇರುವ ಕಾರಣ ಪಾತ್ರಕ್ಕೆ ಒಪ್ಪುತ್ತಾಳೆ ಎಂದು ವರ್ಷದ ಬಳಿಕ ಮತ್ತೆ ಕರೆ ಮಾಡಿ ಆಯ್ಕೆ ಮಾಡಿದರು. ಆಗ, ನಾನು ನಿರಾಕರಿಸಿದ್ದೆ. ಆದರೆ, ಅಮ್ಮ, ಅಣ್ಣ ನನ್ನನ್ನು ಒಪ್ಪಿಸಿದರು. ನನಗೆ ಯಾವುದೇ ನಟನೆ ಹಿನ್ನೆಲೆ ಇಲ್ಲ. ಹೀಗಾಗಿ ವರ್ಕ್‌ಶಾಪ್‌ನಲ್ಲಿ ಹೆಚ್ಚು ತರಬೇತಿ ಬೇಕಾಯಿತು. ‘ಬ್ಯಾಕ್ ಬೆಂಚರ್ಸ್’ ಬಳಿಕ ಹೆಚ್ಚಿನ ಅವಕಾಶಗಳು ಬರುತ್ತಿವೆ. ಪ್ರೇಮ್ ಕಿರಣ್ ನಿರ್ದೇಶನದ ‘ಮಾಸ್ಕ್’ ಹಾಗೂ ಅಭಿನವ ಕಂಠೀರವ್ ನಿರ್ದೇಶನದ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದೇನೆ. ಇದರ ಜತೆಗೆ ‘ಗಂಗೆ ಗೌರಿ’ ಧಾರವಾಹಿಯಲ್ಲೂ ನಟಿಸುತ್ತಿದ್ದೇನೆ. ಒಟಿಟಿ ವೆಬ್‌ಸರಣಿಯೊಂದರ ಅದು ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ.
‘ಬ್ಯಾಕ್ ಬೆಂಚರ್ಸ್’ ಹೊಸಬರ ಚಿತ್ರ. ಇಲ್ಲಿ ನಾವು ನಟಿಸುವುದರ ಜತೆಗೆ ನಮ್ಮ ಭವಿಷ್ಯವನ್ನು ಕಂಡುಕೊಂಡಿದ್ದೇವೆ. ನಟನೆಯಲ್ಲಿ ನುರಿತಿದ್ದೇವೆ. ವಿದ್ಯಾರ್ಥಿ ಹಾಗೂ ಯುವಕರು ತಪ್ಪದೇ ನೋಡಬಹುದಾದ ಚಿತ್ರವಿದು. ಕಾಲೇಜು ದಿನಗಳು ಮತ್ತೊಮ್ಮೆ ಮರುಕಳಿಸಲಿವೆ ಎಂಬುದಂತೂ ಸತ್ಯ.
ಕುಂಕುಮ್ ಹರಿಹರ್, ನಟಿ