ಅನಂತಪುರ ಕೆರೆಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

Published on

ಕಾಸರಗೋಡು: ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ ಅನಂತಪದ್ಮನಾಭ ಕ್ಷೇತ್ರದ ಕೆರೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ಬಬಿಯಾ ಮೊಸಳೆ ಮೃತಪಟ್ಟ ವರ್ಷದ ಬಳಿಕ ಶನಿವಾರ ಮಧ್ಯಾಹ್ನ ಮತ್ತೊಂದು ಮೊಸಳೆ ಮರಿ ಪ್ರತ್ಯಕ್ಷಗೊಂಡಿದ್ದು, ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.

ಶ್ರೀ ಅನಂತಪದ್ಮನಾಭ ಕ್ಷೇತ್ರ ಬಬಿಯಾ ಹೆಸರಿನ ಸಸ್ಯಾಹಾರಿ ಮೊಸಳೆಯಿಂದಲೂ ಪ್ರಸಿದ್ಧವಾಗಿತ್ತು. ದೇವಾಲಯ ಪರಿಸರದ ಸರೋವರದಲ್ಲಿ ವಾಸಿಸುತ್ತಿದ್ದ ಮೊಸಳೆ ಪ್ರತಿನಿತ್ಯ ಮಧ್ಯಾಹ್ನ ಪೂಜೆ ಬಳಿಕ ಅರ್ಚಕರು ನೀಡುತ್ತಿದ್ದ ನೈವೇದ್ಯ ಸ್ವೀಕರಿಸಲು ಅಲ್ಪಹೊತ್ತು ಕಾಣಿಸುತ್ತಿತ್ತು. ಬಬಿಯಾ ಮೊಸಳೆ ಅ.9ರಂದು ಮೃತಪಟ್ಟಿತ್ತು.

ಕ್ಷೇತ್ರದ ಇತಿಹಾಸದಂತೆ ಒಂದು ಮರೆಯಾದರೆ ಮತ್ತೊಂದು ತನ್ನಿಂದ ತಾನೇ ಆಗಮಿಸುವುದು ಪ್ರತೀತಿ. ಅದರಂತೆ ಬಬಿಯಾ ಮೃತಟ್ಟು ಒಂದು ವರ್ಷ ಒಂದು ತಿಂಗಳು ಕಳೆಯುವುದರೊಳಗೆ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಕಳೆದ ಬುಧವಾರವೇ ಇಲ್ಲಿ ಮೊಸಳೆ ನೋಡಿರುವುದಾಗಿ ಕೆಲವು ಭಕ್ತರು ತಿಳಿಸಿದ್ದರೂ, ಬೇರಾರಿಗೂ ಇದು ಗೋಚರಿಸಿರಲಿಲ್ಲ. ಶನಿವಾರ ದೇವಾಲಯದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು ಕಣ್ಣಾರೆ ಕಂಡು ದೃಢೀಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net