ಬಾಬು ಜಗಜೀವನರಾಮ್ ವಿಕಾಸಮುಖಿ ಆರ್ಥಿಕ ಚಿಂತನೆಗಳು

jaga
Published on

ರಾಷ್ಟ್ರರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಬಾಬು ಜಗಜೀವನರಾಮ್ ರಾಷ್ಟ್ರದ ಏಳಿಗೆ, ಸಮಾಜ ಸುಧಾರಣೆ ಮತ್ತು ದೀನದಲಿತರ ಅಭ್ಯುದಯಕ್ಕಾಗಿ ಶ್ರಮಿಸಿದರು. ಈ ಕಾರಣದಿಂದ ಸರ್ಕಾರ ಅವರ ಜಯಂತಿಯನ್ನು ರಾಷ್ಟ್ರದಾದ್ಯಂತ ಆಚರಿಸುತ್ತ ಬಂದಿದೆ.

ಬಿಹಾರದ ಚಾಂದ್ವ ಗ್ರಾಮದಲ್ಲಿ 1908ರ ಏ. 5ರಂದು ಜನಿಸಿದ ಜಗಜೀವನರಾಮ್ ಬಾಲ್ಯದಿಂದಲೇ ಪ್ರತಿಭಾವಂತ. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅಸ್ಪ ೃ್ಯತೆ ವಿರುದ್ಧ ಪ್ರತಿಭಟಿಸಿದರು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದು ಜಿಲ್ಲೆಗೆ ಮೊದಲನೆಯವರಾದರು. ಪಿಯುಸಿ ನಂತರ, ಮೊದಲ ದರ್ಜೆಯಲ್ಲಿ ಬಿಎಸ್ಸಿ ಉತ್ತೀರ್ಣರಾದರು. ಆ ಕಾಲದಲ್ಲಿ ಬಿಎಸ್ಸಿ ಪದವೀಧರರಿಗೆ ನೌಕರಿ ಸಿಗುವುದು ಕಷ್ಟವಿರಲಿಲ್ಲ. ಆದರೆ ಇವರ ಸಂವೇದನಾಶೀಲ ಮನಸ್ಸು ಸಮಾಜ ಸುಧಾರಣೆಯ ಕಡೆಗೆ ವಾಲಿತ್ತು.

1934ರ ಸುಮಾರಿಗೆ ಬಿಹಾರದಲ್ಲಿ ಭೀಕರ ಬರಗಾಲ. ಭಾರಿ ಭೂಕಂಪ. ಸಾವಿರಾರು ಜನರು ಮನೆಮಠ ಕಳೆದುಕೊಳ್ಳಬೇಕಾಯಿತು. ಆಗ ಯುವಕನಾಗಿದ್ದ ಜಗಜೀವನರಾಮ್ ರಾಷ್ಟ್ರೀಯ ನಾಯಕರಾದ ಗಾಂಧೀಜಿ, ಡಾ. ರಾಜೇಂದ್ರ ಪ್ರಸಾದ್, ಮದನಮೋಹನ್ ಮಾಳವೀಯ ಮುಂತಾದವರನ್ನು ಸಂರ್ಪಸಿ, ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಶ್ರಮಿಸಿದರು. ಬಾಲ್ಯದಿಂದಲೇ ಬಡತನದ ಸಮಸ್ಯೆ ಅರಿತಿದ್ದರಿಂದ ಬಡವರ, ಕೂಲಿಕಾರರ ಕುರಿತು ಸಹಾನುಭೂತಿ ಮತ್ತು ಅಂತಃಕರಣ ಹೊಂದಿದ್ದರು. ಇವರ ಸೋದರ ಶಾಂತಲಾಲ್ ಕೊಲ್ಕತ್ತದ ಸರ್ಕಾರಿ ವೈದ್ಯಕೀಯ ಕಾಲೇಜ್​ನಲ್ಲಿ ಕಾಂಪೌಂಡರ್ ಆಗಿದ್ದರು. ಬಾಬೂಜಿ ರಜಾದಿನಗಳನ್ನು ಕಳೆಯಲು ಕೊಲ್ಕತ್ತ್ತೆ ಹೋದಾಗ ಗಿರಣಿ- ಕಾರ್ಖಾನೆಗಳ ಕಾರ್ವಿುಕರ ಕಷ್ಟಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು. ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕಾದರೆ ರಾಜಕೀಯ ಅಧಿಕಾರ ಅಗತ್ಯವೆಂಬ ನಿರ್ಣಯಕ್ಕೆ ಬಂದರು.

ಜಗಜೀವನರಾಮ್ ಅವರಿಗೆ ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕರ ಪರಿಚಯವಿದ್ದುದರಿಂದ ರಾಜಕೀಯ ಪ್ರವೇಶ ಕಷ್ಟವಾಗಲಿಲ್ಲ. ಸಸಾರಾಂ ಕ್ಷೇತ್ರದ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. ಅಲ್ಲಿಂದ ಸತತ 45 ವರ್ಷ ರಾಷ್ಟ್ರ ರಾಜಕಾರಣದಲ್ಲಿ ವಿವಿಧ ಇಲಾಖೆಗಳ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿ, ಉಪಪ್ರಧಾನಿಯಾಗಿ ಕೆಲಸ ಮಾಡಿದರು. ದುಡಿಯುವ ವರ್ಗ- ದೀನದಲಿತರ ಏಳ್ಗೆ ಆಗಬೇಕಾದರೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಮುಖ್ಯ ಎಂಬುದನ್ನು ಮನಗಂಡಿದ್ದರು.

1946ರಿಂದ 1952ರವರೆಗೆ ಕೇಂದ್ರ ಕಾರ್ವಿುಕ ಮಂತ್ರಿಯಾಗಿದ್ದರು. ನಂತರ 1966- 67ರಲ್ಲೂ ಇದೇ ಖಾತೆ ನಿರ್ವಹಿಸಿದರು. ಕಾರ್ವಿುಕರ ಸ್ಥಿತಿಗತಿ ಪರಿಗಣಿಸಿ, ಅವರ ಜೀವನ ಸುಧಾರಣೆಗಾಗಿ ಅನೇಕ ನಿಯಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರು. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನನ್ನು ರೂಪಿಸಿದರು. ನೌಕರರ ರಾಜ್ಯ ವಿಮಾ ನಿಧಿಯ ನಿಯಮ, ಭವಿಷ್ಯನಿಧಿ, ಬೋನಸ್ ನಿಯಮ ಮುಂತಾದ ಹಲವಾರು ರಚನಾತ್ಮಕ ಕಾನೂನುಗಳನ್ನು ಮಾಡಿ ಕಾರ್ವಿುಕರ ಕಲ್ಯಾಣಕ್ಕೆ ಅನುವು ಮಾಡಿಕೊಟ್ಟರು. ದುಡಿಯುವ ವರ್ಗದ ಜನರ ಕೈಗೆ ಹಣ ಬಂದಾಗ ಅದರಿಂದ ವ್ಯಾಪಾರದ ಅಭಿವೃದ್ಧಿಯಾಗಿ ರಾಷ್ಟ್ರದ ಪ್ರಗತಿ ಸಾಧ್ಯವಾಗುತ್ತದೆ ಎಂದವರು ಅರಿತಿದ್ದರು.

ಸಾರಿಗೆ ಮತ್ತು ಸಂಪರ್ಕ ಖಾತೆ ಮಂತ್ರಿಯಾದಾಗ ಅಂಚೆ ಕಚೇರಿಗಳನ್ನು ಹಳ್ಳಿಹಳ್ಳಿಗಳಿಗೆ ವಿಸ್ತರಿಸಿದರು. ನಾಲ್ಕನೇ ದರ್ಜೆ ಹುದ್ದೆಗಳಿಗೆ ಪರಿಶಿಷ್ಟ ಜಾತಿಯವರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಲು ಆದೇಶವಿತ್ತರು. ಹುಟ್ಟುತ್ತಲೇ ಬಡವರಾಗಿದ್ದ ದಲಿತ ವರ್ಗದವರಿಗೆ ನೌಕರಿ ಎಂಬುದು ಕನಸಿನ ಮಾತಾಗಿತ್ತು. ಅಂಥವರಿಗೆ ಸರ್ಕಾರದಲ್ಲಿ ನೌಕರಿಯ ಅವಕಾಶಗಳನ್ನು ಒದಗಿಸಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬಾಬೂಜಿ ಪ್ರಯತ್ನ ಮಾಡಿದರು.

ರೈಲ್ವೆ ಮಂತ್ರಿಯಾದ ಮೇಲೆ ಭಾರತದ ರೈಲ್ವೆ ವ್ಯವಸ್ಥೆ ಜಗತ್ತಿನಲ್ಲೇ 4ನೇ ಸ್ಥಾನಕ್ಕೆ ಏರಿತು ಮತ್ತು ಏಷ್ಯಾದಲ್ಲೇ ಬೃಹತ್ತಾದ ರೈಲ್ವೆ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜಗಜೀವನರಾಮ್ ಒಟ್ಟು ಏಳು ಬಾರಿ ರೈಲ್ವೆ ಬಜೆಟ್ ಮಂಡಿಸಿದರು. ಎಂದೂ ಪ್ರಯಾಣ ದರ ಹೆಚ್ಚಿಸದೆ ಎಲ್ಲ ವರ್ಗದ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳು ದೊರಕುವಂತೆ ನೋಡಿಕೊಂಡರು. ರೈಲ್ವೆ ನೌಕರರ ಶ್ರೇಯೋಭಿವೃದ್ಧಿ ಬಗ್ಗೆ ಗಮನ ಹರಿಸಿದರು. 1957ರಲ್ಲಿ ನೌಕರರಿಗೆ ಪಿಂಚಣಿ ಸ್ಕೀಮ್ ಜಾರಿಗೆ ತಂದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ ಮುಂಬಡ್ತಿ ಸಿಗುವಂತೆ ಕಾನೂನು ರೂಪಿಸಿದರು. ಅಧಿಕಾರಿಗಳು 4ನೇ ದರ್ಜೆ ನೌಕರರ ಮೇಲೆ ದಬ್ಬಾಳಿಕೆ ನಡೆಸದಂತೆ ರೈಲ್ವೆ ಮಜ್ದೂರ್ ಯೂನಿಯನ್ ಎಂಬ ಸಂಘಟನೆ ಹುಟ್ಟುಹಾಕಿದರು. ರೈಲ್ವೆ ಇಲಾಖೆಯಲ್ಲಿ, ಕ್ಯಾಂಟೀನ್​ಗಳಲ್ಲಿ ಪ.ಜಾ/ಪ.ಪಂ.ದವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಮಾಜ ಸುಧಾರಣೆಯಲ್ಲಿ ದೊಡ್ಡ ಕ್ರಾಂತಿ ಮಾಡಿದರು. ಮೀಸಲಾತಿಯಡಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಕಾನೂನು ಪ್ರಕಾರ ತುಂಬುವಂತೆ ನೋಡಿಕೊಂಡರು. ಬಾಬೂಜಿ ಅವರ ವಿವೇಕ, ದೂರದೃಷ್ಟಿ, ಹೊಸತನದ ಚಿಂತನೆಗಳು ದೇಶದಲ್ಲಿನ ರೈಲ್ವೆ ವ್ಯವಸ್ಥೆಯನ್ನು ಸದೃಢಗೊಳಿಸಿದವು.

ಜಗಜೀವನರಾಮ್ 1967-70, 1970-77ರವರೆಗೆ ಕೃಷಿ ಮಂತ್ರಿಯಾಗಿ ಮಾಡಿದ ಸಾಧನೆಯೂ ಗಮನಾರ್ಹ. ಈ ಖಾತೆ ವಹಿಸಿಕೊಂಡ ಸಂದರ್ಭ ತುಂಬ ಸವಾಲಿನಿಂದ ಕೂಡಿತ್ತು. ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ದೇಶದ ಬಹುಭಾಗದಲ್ಲಿ ಪಾರಂಪರಿಕ ಕೃಷಿ ಪದ್ಧತಿಯಿದ್ದು, ರೈತರು ಮಳೆಯನ್ನೇ ಅವಲಂಬಿಸಿದ್ದರು. ಆ ಸಂದರ್ಭದಲ್ಲಿ ಬಾಬೂಜಿ ಭೂರಹಿತ ಸಾಗುವಳಿದಾರರಿಗೆ ಸರ್ಕಾರಿ ಭೂಮಿ ಹಂಚಲು ಯತ್ನಿಸಿದರು. ಸಹಕಾರ ಸೇವೆ, ಉತ್ತಮ ಬೀಜ, ರಸಗೊಬ್ಬರ- ಮುಂತಾದ ಯೋಜನೆಗಳನ್ನು ಜಾರಿಗೆ ತಂದು, ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚುವಂತೆ ಮಾಡಿದರು. ಬ್ಯಾಂಕ್​ಗಳಲ್ಲಿ ರೈತರಿಗೆ ಕೃಷಿ ಸಾಲವನ್ನು ಸಬ್ಸಿಡಿಯೊಂದಿಗೆ ಕೊಡಿಸುವಲ್ಲಿ ಯಶಸ್ವಿಯಾದರು. ಅತ್ಯಂತ ಕಡು ಬಡವರಿಗೆ ಕೃಷಿ ಉಪಕರಣಗಳನ್ನು ಸರ್ಕಾರದಿಂದ ಉಚಿತವಾಗಿ ಹಂಚಿದರು. ಈ ಎಲ್ಲ ಪ್ರಯತ್ನದಿಂದ ರೈತರಲ್ಲಿ ಉತ್ಸಾಹ ಮೂಡಿ ಕೃಷಿಯಿಂದ ಹೆಚ್ಚಿನ ಫಸಲನ್ನು ತೆಗೆಯಲು ಸಾಧ್ಯವಾಯಿತು. ಕೃಷಿ ಕ್ಷೇತ್ರದಲ್ಲಿ ಪಾರಂಪರಿಕ ಕೃಷಿ ಪದ್ಧತಿ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಾಬೂಜಿ ಪ್ರೋತ್ಸಾಹಿಸಿದರು. ಕೃಷಿ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ ‘ಹಸಿರು ಕ್ರಾಂತಿಯ ಹರಿಕಾರ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

ಬಾಬೂಜಿ ನಮ್ಮನ್ನು ಅಗಲಿ ನಾಲ್ಕು ದಶಕಗಳು ಕಳೆದಿವೆ. ಬಿಹಾರ ಪ್ರಾಂತ್ಯದ ಹಳ್ಳಿಯ ಒಬ್ಬ ಹುಡುಗ ಹಂತಹಂತವಾಗಿ ಮೇಲೇರಿ ನಾಲ್ಕು ದಶಕಗಳಿಗೂ ಮಿಕ್ಕಿ ರಾಷ್ಟ್ರ ರಾಜಕಾರಣದಲ್ಲಿ ಒಂದು ಧ್ರುವತಾರೆಯಾಗಿ ಬೆಳಗಿದ್ದು ಪ್ರೇರಣಾದಾಯಿ.

(ಲೇಖಕರು ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ಮೈಸೂರು ವಿವಿ ವಿಸ್ತರಣ ಕೇಂದ್ರದ ನಿವೃತ್ತ ನಿರ್ದೇಶಕರು)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net