

ನವದೆಹಲಿ: ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಸಾಗಿಸಿ ತಮ್ಮ ಮಾಲೀಕತ್ವದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳ್ವೀಯ ಅವರಿಗೆ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಶ್ರೀನಿವಾಸ್ ಅವರ ಮಾಲೀಕತ್ವದ ಸ್ಕಾರ್ಪಿಯೋದಲ್ಲಿ ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಯಲಗುಡ್ಡ ಶ್ರವಣ ರಾವ್ ಮತ್ತು ಬೆಂಗಳೂರು ಮೂಲದ ಮನೀಶ್ ಬಸವರಾಜ ಶಿಲ್ಲೆ ಗುರುಗ್ರಾಮದಿಂದ ದೆಹಲಿ ಮೂಲಕ ಹರಿಯಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದರು ಎಂದು ಸಂಬಿತ್ ಪಾತ್ರಾ ಹಾಗೂ ಅಮಿತ್ ಮಾಳ್ವೀಯ ಆರೋಪಿಸಿದ್ದರು.
ಅಲ್ಲದೆ, ಈ ಸಂಬಂಧ ಟ್ವೀಟ್ ಮಾಡಿ, ಅದನ್ನು ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಅಲ್ಲಗಳೆದಿರುವ ಬಿ.ವಿ. ಶ್ರೀನಿವಾಸ್, ಇದೊಂದು ಸುಳ್ಳು ಸುದ್ದಿ. ಕೋವಿಡ್ ತುರ್ತು ಕಾರ್ಯದ ಪಾಸ್ ಹೊಂದಿದ್ದ ತಮ್ಮ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಕೋರ್ಟ್ನಲ್ಲಿ ಭೇಟಿ ಮಾಡುವುದಾಗಿ ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳ್ವೀಯ ಅವರಿಗೆ ಸವಾಲು ಹಾಕಿದ್ದಾರೆ.