

ಬೆಂಗಳೂರು: ಕೇವಲ ಸುತ್ತೋಲೆಗಳ ಮೇಲೆ ಅನಧಿಕೃತ ಸೈಟ್, ಮನೆ, ್ಲ್ಯಾಟ್‌ಗಳಿಗೆ ಬಿ ಖಾತಾ ನೀಡುತ್ತಿದ್ದ ರಾಜ್ಯ ಸರ್ಕಾರ ಕೊನೆಗೂ ಕಾನೂನು ಬಲ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಆಸ್ತಿಗಳಿಗೆ ಎ ಮತ್ತು ಬಿ ಖಾತಾಗಳನ್ನು ನೀಡುವ ನಿಯಮಗಳನ್ನು ಅನುಮೋದಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುತ್ತೋಲೆಗಳ ಆಧಾರದ ಮೇಲೆ 2024ರ ಸೆ.30ರವರೆಗೆ ನೀಡಿರುವ ಎ ಮತ್ತು ಬಿ ಖಾತಾಗಳನ್ನು ಕಾನೂನು ರಕ್ಷಣೆ ನೀಡಲಾಗಿದೆ. ಆದಾಗ್ಯೂ, ವಲಯ ನಿಯಮಗಳು ಮತ್ತು ಮಾಸ್ಟರ್ ಪ್ಲ್ಯಾನ್ ಅನ್ನು ಉಲ್ಲಂಘಿಸುವ ಮತ್ತು ಅಸ್ತಿತ್ವದಲ್ಲಿ ಇರುವ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅಕ್ರಮ-ಸಕ್ರಮ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಉಲ್ಲಂಘನೆ ಎಂದು ಕಾನೂನಿನಲ್ಲಿ ಅರ್ಥೈಸಲಾಗುತ್ತದೆ. ಆದರಿಂದ ಈಗಾಗಲೇ ಅನಧಿಕೃತ ಆಸ್ತಿಗಳಿಗೆ ನೀಡಿರುವ ಬಿ ಖಾತಾ ವ್ಯವಸ್ಥೆ ಮುಂದುವರಿಯುತ್ತದೆ.
ಆದರೆ, ಸರ್ಕಾರದ ಪ್ರಕಾರ ಬಿ ಖಾತಾ ಕೇವಲ ಆಸ್ತಿ ಮಾರಾಟ, ಅಡಮಾನ ಮತ್ತು ಖರೀದಿಗಳಿಗೆ ಸಹ ಬಳಸುವುದರೊಂದಿಗೆ ವಿಸ್ತೃತ ಕಾನೂನು ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿಬಿಎಂಪಿಯಲ್ಲಿ 2009ಕ್ಕಿಂತ ಮೊದಲು ಎ ಮತ್ತು ಬಿ ಖಾತಾಗಳ ಪರಿಕಲ್ಪನೆ ಇರಲಿಲ್ಲ. 2020ರ ಮೇ 22ರಲ್ಲಿ ಕೆಟಿಸಿಪಿ ಕಾಯ್ದೆ 1961ಕ್ಕೆ ತಿದ್ದುಪಡಿಯನ್ನು ತಂದು ಅನುಮೋದಿತ ಲೇಔಟ್‌ಗಳ ಆಸ್ತಿಗಳಿಗೆ ಎ ಖಾತಾ ಎಂದು ಮತ್ತು ಅನಧಿಕೃತ ಆಸ್ತಿಗಳಿಗೆ ಬಿ ಖಾತಾ ನೀಡಲು ಶುರು ಮಾಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಿ ಖಾತಾ ಸೈಟ್‌ಗಳಲ್ಲಿ ನಿರ್ಮಾಣ ಆಗುತ್ತಿರುವ ಅನಧಿಕೃತ ಕಟ್ಟಡಗಳಿಗೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಕಟ್ಟಡ ವಿನ್ಯಾಸ ಇಲ್ಲದೆ ನಿರ್ಮಾಣ ಮಾಡುವುದರಿಂದ ತೊಂದರೆ ಉಂಟಾಗುತ್ತಿತ್ತು. ರಸ್ತೆ, ಚರಂಡಿ ಸೇರಿ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಸಮಸ್ಯೆಯಾಗಿತ್ತು.
ಆದರಿಂದ 2024ರ ಸೆ.30ರ ಒಳಗೆ ನೀಡಿರುವ ಬಿ ಖಾತಾಗಳನ್ನು ಕಾನೂನಿನಲ್ಲಿ ಮಾನ್ಯತೆ ನೀಡಲಾಗಿದೆ. ಇದಲ್ಲದೆ, ಖಾಸಗಿ ರಸ್ತೆಗಳನ್ನು 2024ರ ಜಿಬಿಜಿ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆ ಎಂದು ೋಷಣೆ ಮಾಡಲಾಗಿದೆ. ಜತೆಗೆ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಲಾಗಿದೆ. ಡಿಜಿಟಲ್ ಖಾತಾ ಇಲ್ಲದೆ ಸಬ್ ರಿಜಿಸ್ಟ್ರಾರ್‌ಗಳಲ್ಲಿ ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಆದರಿಂದ ಬಿ ಖಾತಾಗೂ ಕಾನೂನು ಬಲ ನೀಡಲಾಗಿದೆ. ಹಾಗಂತ ಬಿ ಖಾತಾಕ್ಕೆ ಎ ಖಾತಾ ಎಂದು ಪರಿಗಣಿಸುವುದಿಲ್ಲ. ಬಿ ಖಾತಾದಲ್ಲಿ ಅನಧಿಕೃತ ಕಟ್ಟಡವೆಂದೇ ಪರಿಗಣಿಸಲಾಗುತ್ತದೆ ಎಂದು ಕಾನೂನು ಸಚಿವರು ಸ್ಪಷ್ಟಪಡಿಸಿದ್ದಾರೆ.
ಖಾತಾ ಪಡೆಯಲು ಷರತ್ತು
ಆಸ್ತಿಗಳನ್ನು ನಿಯಂತ್ರಿಸಲು, ಖಾಲಿ ನಿವೇಶನ/ಬಹುಮಹಡಿ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಖಾಸಗಿ ರಸ್ತೆ ಇದ್ದರೆ ಸಾರ್ವಜನಿಕ ರಸ್ತೆ ಎಂದು ಘೋಷಿಸಲಾಗುತ್ತದೆ. ನಂತರ, ಕಂದಾಯ ಭೂಮಿಯಲ್ಲಿದ್ದರೆ, ಸರ್ವೇ ಸಂಖ್ಯೆ/ಹಿಸ್ಸಾ ಸರ್ವೇ ಸಂಖ್ಯೆಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳ ಅಡಿಯಲ್ಲಿ ಪರಿವರ್ತಿಸಬೇಕಾಗುತ್ತದೆ.
ಬೆಂಗಳೂರಿನ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ವ್ಯಾಪ್ತಿಗೆ ಬರಬೇಕು. ಮಾಲೀಕರು ಒಂದೇ ್ಲ್ಯಾಟ್ ಅಥವಾ ಲೇಔಟ್ ಆಗಿ ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ. ಅದರ ನಂತರ, ಪರಿವರ್ತನೆಯೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಪ್ರಕಾರ ಬಿಬಿಎಂಪಿಯಿಂದ ಖಾತಾ ವಿತರಿಸಲಾಗುತ್ತದೆ. ಬಹುಮಹಡಿ ಕಟ್ಟಡಗಳ ಸಂದರ್ಭದಲ್ಲಿ ಮಾಲೀಕರು ಸ್ವಾಧೀನ ಅನುಭವ ಪ್ರಮಾಣಪತ್ರಗಳನ್ನು ಪಡೆಯಬೇಕು. ಆನಂತರ ಆಸ್ತಿ ಮತ್ತು ಕಟ್ಟಡಕ್ಕೆ ಬಿಬಿಎಂಪಿಯಿಂದ ಖಾತಾ ನೀಡಲಾಗುತ್ತದೆ.
ಹೊಸ ಮಹಾನಗರ ಪಾಲಿಕೆಗೂ ಅನ್ವಯ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ರಚಿಸಿದಾಗ ಎಲ್ಲ ಹೊಸ ಮಹಾನಗರ ಪಾಲಿಕೆಗಳಿಗೂ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಇದನ್ನು ಯಥಾವತ್ತಾಗಿ ಅನ್ವಯಿಸಲಾಗುತ್ತದೆ.