ಅಜೋಲಾ ಪಶುಗಳಿಗೆ ಪೌಷ್ಟಿಕ ಆಹಾರ

krushi university
ಶಿಕಾರಿಪುರ ತಾಲೂಕಿನ ಸುರಗಿಹಳ್ಳಿಯಲ್ಲಿ ಅಜೋಲಾ ಬೆಳೆ ಕುರಿತು ರೈತರೊಂದಿಗೆ ಕೃಷಿ ವಿವಿ ವಿದ್ಯಾರ್ಥಿಗಳು ಚರ್ಚೆ ನಡೆಸಿದರು.
Published on

ಶಿಕಾರಿಪುರ: ಅಜೋಲಾ ಸಸ್ಯ ಪಶು ಆಹಾರವಾಗಿರುವುದರಿಂದ ರೈತರಿಗೆ ಇದು ಉಪಯುಕ್ತ. ಅಜೋಲಾ ಸಸ್ಯಗಳ ಬೆಳೆಯುವತ್ತ ಗಮನಹರಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ರೈತರ ಗಮನ ಸೆಳೆದರು.

ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಜೋಲಾ ಅತ್ಯುತ್ತಮ ಜಾನುವಾರು ಮೇವು ವಿಷಯ ಕುರಿತು ಗುಂಪು ಚರ್ಚೆ ನಡೆಸಿದರು.

ಅಜೋಲಾವನ್ನು ಮುಖ್ಯವಾಗಿ ಪಶು ಆಹಾರಕ್ಕಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಡೇರಿ, ಪ್ರಾಣಿಗಳಿಗೆ ಪೌಷ್ಟಿಕ ಮತ್ತು ಅಗ್ಗದ ಸಾವಯವ ಆಹಾರವಾಗಿ ಲಭ್ಯವಿದೆ. ಅಜೋಲಾ ಸಸ್ಯೆದಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ರಂಜಕ, ತಾಮ್ರ, ಮ್ಯಾಂಗನೀಸ್ ಮುಂತಾದ ಖನಿಜಗಳು ಈ ಸಸ್ಯದಲ್ಲಿ ಕಂಡುಬರುತ್ತವೆ ಮತ್ತು ಅಜೋಲಾವನ್ನು ಜೈವಿಕ ಗೊಬ್ಬರವಾಗಿಯೂ ಉಪಯೋಗಿಸಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಸಾವಯವ ಮೇವು ಅಜೋಲಾ, ಜಾನುವಾರುಗಳಿಗೆ ಉತ್ತಮ ಆಹಾರ. ಇದು ಪ್ರಾಣಿಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮಣ್ಣಿನ ಬದಲಿಗೆ ನೀರಿನಲ್ಲಿ ಅಥವಾ ಕೊಳಗಳಲ್ಲಿ ಬೆಳೆಯುವ ಸಸ್ಯ. ಈ ಸಸ್ಯವು ಶುದ್ಧ ನೀರಿನಲ್ಲಿ ಅಥವಾ ಮಣ್ಣಿನಲ್ಲಿ ತ್ವರಿತವಾಗಿ ಬೆಳೆಯುತ್ತದೆ ಎಂದು ಗುಂಪು ಚರ್ಚೆಯ ಬಳಿಕ ಅಜೋಲಾವನ್ನು ಬೆಳೆಯುವ ವಿಧಾನದ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಊರಿನ ಮುಖಂಡರು, ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net