

ಶಿವಮೊಗ್ಗ: ಶಿವಮೊಗ್ಗದಲ್ಲಿ ನನೆಗುದಿಗೆ ಬಿದ್ದಿರುವ ಆಯುಷ್ ವಿಶ್ವವಿದ್ಯಾಲಯದ ಚಟುವಟಿಕೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ತಕ್ಷಣವೇ ವಿಶೇಷ ಕರ್ತವ್ಯ ಅಧಿಕಾರಿ ನೇಮಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಕಳೆದ ಹಲವು ತಿಂಗಳಿಂದ ಆಯುಷ್ ವಿವಿಗೆ ಆಡಳಿತಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಮೂಲಕ ವಿವಿಗೆ ಎಳ್ಳುನೀರು ಬಿಡಲು ಸರ್ಕಾರ ಮುಂದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಶಿಫಾರಸ್ಸು ಹಾಗೂ ಸಂಘಟನೆಯ ಒತ್ತಾಯದ ಮೇರೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗಕ್ಕೆ ಆಯುಷ್ ವಿವಿ ಮಂಜೂರುಗೊಳಿಸಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಿವಿಗೆ 200 ಕೋಟಿ ರೂ. ಮೀಸಲಿಟ್ಟು, 20 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದರು ಎಂದರು.
2023ರ ಮಾ.1ರಂದು ಡಾ. ಲೋಕೇಶ್ ಎಂಬುವರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸರ್ಕಾರ ನಿಯೋಜಿಸಿತ್ತು. ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಡಾ. ಲೋಕೇಶ್ ಅವರನ್ನು ಚುನಾವಣಾ ಆಯೋಗವು ಚುನಾವಣಾ ಉದ್ದೇಶಕ್ಕಾಗಿ ವರ್ಗಾವಣೆಗೊಳಿಸಿತ್ತು. ಆದರೆ ನಂತರ ವಿವಿಯ ಹುದ್ದೆಗೆ ಯಾರೊಬ್ಬರನ್ನು ಇಲ್ಲಿಯವರೆಗೂ ನಿಯೋಜಿಸಿಲ್ಲ ಎಂದು ದೂರಿದರು.
ಈಗಾಗಲೇ ಸಂಘಟನೆಯು ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ವಿವಿಗೆ ವಿಶೇಷ ಕರ್ತವ್ಯ ಅಧಿಕಾರಿ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ವಿವಿಗೆ ಕರ್ತವ್ಯ ಅಧಿಕಾರಿ ನೇಮಕಕ್ಕೆ ಸಿಎಂ, ಡಿಸಿಎಂ ಕ್ರಮ ಕೈಗೊಳ್ಳಬೇಕು ಎಂದು ಕಲ್ಲೂರು ಮೇಘರಾಜ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಪ್ರಮುಖರಾದ ನರಸಿಂಹಮೂರ್ತಿ, ನಾಗೇಶ್ ರಾವ್, ಶಂಕ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.