ಅತಿಸಾರ ಪರಿಹಾರಕ್ಕೆ ಆಯುರ್ವೆದದ ಹಾದಿ

athi
Published on
ಧನ್ವಂತರಿ
 ಸಮಾಜದಲ್ಲಿ ದೇಹದ ತೂಕ ಹೆಚ್ಚಿರುವ ಜನ ಕೊಬ್ಬನ್ನು ಕರಗಿಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆೆ. ಕೆಲವರು ಎಷ್ಟೇ ವ್ಯಾಯಾಮ ಮಾಡಿದರೂ, ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ ಶರೀರದ ಭಾರ ತಗ್ಗದೇ ಮಾನಸಿಕವಾಗಿ ಕುಗ್ಗಿ ಹೋಗುವುದೂ ಇದೆ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದೇ ವ್ಯಕ್ತಿಯನ್ನು ಕೇವಲ ಒಂದು ವಾರ ಬಿಟ್ಟು ನೋಡಿದಾಗ ಐದು ಕಿಲೋದಷ್ಟು ತೂಕ ಕಳೆದುಕೊಂಡಿರುವುದನ್ನು ನೋಡಿ ಅಚ್ಚರಿಪಡುವ ಸಂದರ್ಭವೂ ಇರುತ್ತದೆ! ನಾಲ್ಕೈದು ದಿನ ತೀವ್ರವಾಗಿ ಭೇದಿಯಾದರೆ ಶರೀರದ ತೂಕ ಸರ್ರೆಂದು ಇಳಿದು ಹೋಗಿರುತ್ತದೆ. ನಮ್ಮ ದೇಹದಲ್ಲಿ ಬಹುಪಾಲು ನೀರಿನ ಅಂಶವೇ ಇದ್ದು ಅತಿಸಾರ ಆದಾಗ ದೇಹದ ದ್ರವಾಂಶ ತೀವ್ರವಾಗಿ ಕಡಿಮೆಯಾಗುತ್ತದೆ. ಇಲ್ಲಿ ಆಗುವುದು ಆರೋಗ್ಯಕರ ತೂಕದ ಇಳಿಕೆಯಲ್ಲ. ಜೊತೆಯಲ್ಲಿ ಬಲನಾಶ, ಮುಖದ ಕಳೆಹಾನಿ, ಹಸಿವು ಬಾಯಿರುಚಿ ಇಲ್ಲದಾಗುವುದು ಹಾಗೂ ದೇಹವನ್ನು ಆಧರಿಸಿರುವ ಧಾತುಗಳೇ ದುರ್ಬಲವಾಗಿರುತ್ತದೆ.

ಅತಿಸಾರದ ಚಿಕಿತ್ಸೆಯಲ್ಲಿ ಜಠರದ ಅಗ್ನಿ ದೀಪನ, ಗ್ರಾಹಿ, ಸ್ತಂಭಕ, ಸಂತರ್ಪಣ, ಬಲ್ಯ ಚಿಕಿತ್ಸಾ ಸೂತ್ರಗಳನ್ನು ಆಯುರ್ವೆದ ಅನುಸರಿಸುತ್ತದೆ. ಅಜೀರ್ಣದಿಂದಾದ ಆಮ ಚಿಕಿತ್ಸೆಗೆ ಲಂಘನ, ಪಾಚನ, ದ್ರವಾಹಾರಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಉದರದ ಅಗ್ನಿ ಶಕ್ತಿಯನ್ನು ಹೆಚ್ಚಿಸುವುದು ಚಿಕಿತ್ಸೆಯ ಕೇಂದ್ರಬಿಂದು. ಜೀರ್ಣಶಕ್ತಿಯನ್ನು ಹೆಚ್ಚಿಸುವ ಎಲ್ಲಾ ವಿಧವಾದ ಆಹಾರಗಳು ಅತಿಸಾರವನ್ನು ಗುಣಪಡಿಸಲು ಅತ್ಯಂತ ಅವಶ್ಯಕ. ಇದಕ್ಕಾಗಿ ಅನೇಕ ಔಷಧಗಳು, ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳನ್ನು ವಿವರಿಸಿದೆ. ಇವೆಲ್ಲವೂ ವೈದ್ಯರನ್ನು ಅವಲಂಬಿಸಿ ನಡೆಯುವ ಚಿಕಿತ್ಸಾ ಪ್ರಕ್ರಿಯೆ. ಆಯುರ್ವೆದದ ಪ್ರಥಮ ಚಿಕಿತ್ಸೆಗಳೂ ಜನರಿಗೆ ಭೇದಿಯಿಂದ ಆಗುವ ತಾಪತ್ರಯಗಳ ನಿವಾರಣೆಗೆ ಅನುವು ಮಾಡಿಕೊಡುತ್ತವೆ. ಪುಟ್ಟ ಮಕ್ಕಳಿಗೆ ಭೇದಿ ಆಗುತ್ತಿದ್ದಾಗ ಜಾಯಿಕಾಯಿ ಅತ್ಯುತ್ತಮ ಆಪದ್ಬಾಂಧವ. ಎರಡು ವರ್ಷದೊಳಗಿನ ಶಿಶುಗಳಿಗೆ ಒಂದನೇ ಎಂಟು ಭಾಗದಷ್ಟು ಜಾಯಿಕಾಯಿಯನ್ನು ಮಜ್ಜಿಗೆಯಲ್ಲಿ ತೇಯಬೇಕು. ನಾಲ್ಕು ಚಮಚ ಮಜ್ಜಿಗೆ ಸೇರಿಸಿ ಒಮ್ಮೆ ಸೇವಿಸಿದರೆ ಬಹುತೇಕ ಸಂದರ್ಭಗಳಲ್ಲಿ ಭೇದಿ ಅಲ್ಲಿಗೇ ನಿಂತು ಬಿಡುತ್ತದೆ! ಮಧ್ಯಮ ವಯಸ್ಕರಲ್ಲಿ ಅರ್ಧ ಜಾಯಿಕಾಯಿಯನ್ನು ತೇಯ್ದು ಅರ್ಧ ಲೋಟ ಮಜ್ಜಿಗೆಯೊಂದಿಗೆ ಕುಡಿಯಬಹುದು. ದಾಳಿಂಬೆಹಣ್ಣಿನ ಕಾಲು ಭಾಗದ ಒಣಗಿದ ಅಥವಾ ಹಸಿಯಾಗಿರುವ ಸಿಪ್ಪೆಯನ್ನು ಅಥವಾ ಒಳಗಿನ ನಾರು ಭಾಗವನ್ನು ನೀರಿನಲ್ಲಿ ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಆರಿಸಿ ಕುಡಿದರೂ ಭೇದಿ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ. ಕುಟಜ ಅಥವಾ ಕೊಡಸಿಗೆ ಗಿಡದ ಕಾಂಡದ ತೊಗಟೆಯ ಕಷಾಯವೂ ಬಹು ಸಂದರ್ಭಗಳಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಬಾರ್ಲಿ ಗಂಜಿ, ಬಾರ್ಲಿ ಅಂಬಲಿಯೂ ದೇಹಕ್ಕೆ ತ್ರಾಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತೆಂಗಿನ ತುರಿ, ಔಷಧೀಯ ಸಸ್ಯ ಹಾಗೂ ಕಡೆದ ಮಜ್ಜಿಗೆ ಹಾಕಿ ತಯಾರಿಸುವ ತಂಬುಳಿಯಂತೂ ಭೇದಿ ಇದ್ದಾಗ ಬಾಯಿರುಚಿ ಬರಿಸುವ ಆಹಾರವೂ ಹೌದು, ಔಷಧವೂ ಹೌದು. ಬೆಟ್ಟದ ನೆಲ್ಲಿಕಾಯಿಯನ್ನು ಅದು ಬೆಳೆಯುವ ಕಾಲದಲ್ಲಿ ಒಣಗಿಸಿಟ್ಟುಕೊಂಡು ಅದನ್ನು ಹಾಕಿ ಮಾಡುವ ತಂಬುಳಿ ಅತಿಸಾರ ನಿಲ್ಲಿಸಲು ಪ್ರಶಸ್ತ. ಇದೇ ರೀತಿ ಮೆಂತ್ಯೆ, ಜೀರಿಗೆ, ಕೊತ್ತಂಬರಿ ಬೀಜ, ಶುಂಠಿ, ಕೊಡಸಿಗೆ ಹೂವು, ಲಿಂಬೆಹಣ್ಣಿನ ನಾರು, ದಾಳಿಂಬೆ ಸಿಪ್ಪೆ, ದಾಳಿಂಬೆ ಚಿಗುರುಎಲೆ, ಸೀಬೆ ಚಿಗುರುಎಲೆ ಅಥವಾ ಪುದೀನ ಸೊಪ್ಪುಗಳನ್ನು ಬಳಸಿ ಮಾಡುವ ತಂಬುಳಿಗಳೂ ಹಿತಕರವಾಗಿರುತ್ತವೆ.

ಭೇದಿಯಿದ್ದಾಗ ಮಜ್ಜಿಗೆ ಸೇವನೆಯಿಂದ ಅಗ್ನಿ ಶಕ್ತಿ ಹೆಚ್ಚಾಗಿ, ಗ್ರಾಹಿ ಗುಣದಿಂದ ಅತಿಮಲ ಪ್ರವೃತ್ತಿ ಕಡಿಮೆಯಾಗಿ ಶರೀರಕ್ಕೆ ಬಲ ನೀಡುವುದರಿಂದ ಅದನ್ನು ಸೇವಿಸುವುದಕ್ಕೆ ಮಹತ್ವವಿದೆ. ಸೈಂಧವ ಲವಣ, ಹಳೆಯ ಅಕ್ಕಿ, ಕೆಂಪಕ್ಕಿ ಅನ್ನ, ಮೊಸರು, ದಾಳಿಂಬೆ ಹಣ್ಣು, ಸೇಬು ಹಣ್ಣು, ಪಪ್ಪಾಯ ಹಣ್ಣು, ಹುರಿದ ಜೀರಿಗೆ, ಆಡಿನ ಹಾಲು, ಕುದಿಸಿ ಆರಿಸಿದ ನೀರು ಭೇದಿಯಿದ್ದಾಗ ಹಿತವಾಗಿರುತ್ತವೆ. ಜೀರಿಗೆ, ದಾಳಿಂಬೆ ಸಿಪ್ಪೆ ಮೊದಲಾದ ಯಾವುದಾದರೂ ಒಂದು ದ್ರವ್ಯ ತೆಗೆದುಕೊಂಡು ಅದರ ಆರು ಪಟ್ಟು ನೀರು ಹಾಕಿ ಅರ್ಧವಾಗುವ ತನಕ ಕುದಿಸಿ ಅದಕ್ಕೆ ಅನ್ನ ಸೇರಿಸಿ ಸ್ವಲ್ಪ ಶುಂಠಿ, ಹಿಪ್ಪಲಿ, ಸೈಂಧವ ಮಿಶ್ರ ಮಾಡಿ ಸೇವಿಸಿದರೆ ಉಪಯುಕ್ತ. ಹೆಸರು ಬೇಳೆ ಅಥವಾ ಮಸೂರ ಬೇಳೆಯ ಹದಿನೆಂಟು ಪಟ್ಟು ನೀರು ಹಾಕಿ ಕುದಿಸಿ ಈ ಯೂಷ ಎಂಬ ಹೆಸರಿನ ಪಾನೀಯ ಕೂಡ ಉತ್ತಮ ಔಷಧ. ಭೇದಿಯಿದ್ದಾಗ ತೈಲದ ಅಭ್ಯಂಗ, ವ್ಯಾಯಾಮ, ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆ, ಜಿಡ್ಡುಯುಕ್ತ ವ್ಯಂಜನಗಳು, ಎಣ್ಣೆಯಲ್ಲಿ ಕರಿದತಿಂಡಿ, ಮಿತಿಮೀರಿದ ಪ್ರಮಾಣದಲ್ಲಿ ಆಹಾರ ಸೇವನೆಯನ್ನು ವರ್ಜಿಸಬೇಕು. ದ್ರವಾಹಾರ ಸೇವನೆಗೆ ಆದ್ಯತೆ ನೀಡಿದರೆ ಅತಿಸಾರದಿಂದ ಶೀಘ್ರ ಗುಣಮುಖರಾಗುವುದು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net