

ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿಯ ನಡುವೆಯೂ ಗುರುವಾರ ನಗರದಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ಶುಕ್ರವಾರ ಆಯುಧಪೂಜೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುರುವಾರ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮತ್ತು ಮಂಡಿ ಮಾರುಕಟ್ಟೆ, ನಂಜುಮಳಿಗೆ, ಎಂ.ಜಿ. ರಸ್ತೆ ಮಾರುಕಟ್ಟೆ ಸೇರಿದಂತೆ ಧನ್ವಂತ್ರಿ ರಸ್ತೆ, ಆಗ್ರಹಾರ ವೃತ್ತ, ಆರ್‌ಎಂಸಿ, ವಿನೋಬಾ ರಸ್ತೆ, ಸಯ್ಯಜಿರಾವ್ ರಸ್ತೆ, ಜೆ.ಕೆ. ಮೈದಾನ ಸೇರಿದಂತೆ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವ್ಯಾಪಾರ ನಡೆಯಿತು. ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಭೇಟಿ ನೀಡಿದ ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಇದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು.
ಸಯ್ಯಜಿರಾವ್ ರಸ್ತೆಯಲ್ಲಿ ಪೊಲೀಸರು ವಾಹನ ನಿಯಂತ್ರಣಕ್ಕೆ ಪರದಾಡಿದರು. ಹೂ ಮತ್ತು ಹಣ್ಣಿನ ಬೆಲೆ ದ್ವಿಗುಣವಾಗಿ ಜನರ ಕೈ ಸುಟ್ಟಿತು. ಎರಡು, ಮೂರು ದಿನದ ಹಿಂದೆ 60-80 ರೂ.ಗೆ ದೊರೆಯುತ್ತಿದ್ದ ಒಂದು ಮಾರು ಸೇವಂತಿಗೆ ಗುರುವಾರ 120-150 ರೂ.ಗೆ ಮಾರಾಟ ಆಯಿತು.
ಹೂವಿನ ದರ ಏರಿಕೆ: ಹೂವಿನ ಗುಣಮಟ್ಟ, ಬಣ್ಣ ಮತ್ತು ಆಕಾರದ ಮೇಲೆ ಬೆಲೆ ನಿಗದಿ ಮಾಡಲಾಗಿತ್ತು. ಸೇವಂತಿಗೆ ಕೆಜಿಗೆ 320 ರೂ., ಮಲ್ಲಿಗೆ ಕೆಜಿಗೆ 800 ರೂ., ಕನಕಾಂಬರ 1600, ಮರಲೆ 200, ಸುಗಂಧರಾಜ 400, ಗುಲಾಬಿ 400 ರೂ.ಗೆ ಬಿಕರಿಯಾಯಿತು. ಇವು ಸೇರಿದಂತೆ ಚೆಂಡು ಹೂ ಮತ್ತಿತರ ಹೂವುಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ ದುಪ್ಪಟ್ಟಾಗಿದ್ದವು. ಬಾಳೆಹಣ್ಣಿಗೂ ಪ್ರತಿ ಕೆಜಿಗೆ 10-15 ರೂ.ವರೆಗೆ ಏರಿಕೆಯಾಗಿದ್ದು, ಹಣ್ಣಿನ ಗುಣಮಟ್ಟದ ಮೇಲೆ 80-100 ರೂ.ವರೆಗೆ ಮಾರಾಟವಾಯಿತು. ಟೊಮ್ಯಾಟೊ ಸೇರಿದಂತೆ ಉಳಿದ ತರಕಾರಿಗಳ ಬೆಲೆ ಹೆಚ್ಚು ಏರಿಕೆಯಾಗದಿದ್ದರಿಂದ ಜನಸಾಮಾನ್ಯರು ನಿಟ್ಟುಸಿರುಬಿಟ್ಟರು. ಮಧ್ಯಾಹ್ನದ ವೇಳೆ ಮಳೆ ಬಂದಿದ್ದರಿಂದ ವ್ಯಾಪಾರಕ್ಕೆ ಕೆಲಕಾಲ ಅಡ್ಡಿಯುಂಟಾಯಿತು.