‘ಅಯೋಗ್ಯ’ನಿಗೆ ಆನಂದ : ನೀನಾಸಂ ಸತೀಶ್, ರಚಿತಾ ರಾಮ್ ನಟಿಸಿರುವ ಹಿಟ್ ಚಿತ್ರದ ಸೀಕ್ವೆಲ್‌ಗೆ ಭರದ ಸಿದ್ಧತೆ

ಅಯೋಗ್ಯ 2 ಚಿತ್ರದ ಪೋಸ್ಟರ್
ಅಯೋಗ್ಯ 2 ಚಿತ್ರದ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಅಯೋಗ್ಯ ಸಕ್ಸಸ್​ ಆದ ಏಳು ವರ್ಷಕ್ಕೆ ಸೀಕ್ವೆಲ್ ಘೋಷಣೆ
  • ಆಯೋಗ್ಯ 2 ಚಿತ್ರದ ಆಡಿಯೋ ರೈಟ್ 2 ಕೋಟಿ ರೂ.ಗೆ ಮಾರಾಟ
  • ಸತೀಶ್​ ನೀನಾಸಂ, ರಚಿತಾ ಅಭಿನಯದ ಕಾಮಿಡಿ, ಡ್ರಾಮಾ
ಬೆಂಗಳೂರು: ಕಡಿಮೆ, ಮಧ್ಯಮ ಬಜೆಟ್‌ನ ಕನ್ನಡ ಚಿತ್ರಗಳ ಒಟಿಟಿ, ಟಿವಿ, ಆಡಿಯೋ ಹಕ್ಕುಗಳ ಖರೀದಿಗೆ ಸಂಸ್ಥೆಗಳು ಆಸಕ್ತಿ ವಹಿಸುವುದಿಲ್ಲ ಎಂಬ ವಾದವಿದೆ. ಆದರೆ, ಅದನ್ನು ಕನ್ನಡದ ‘ಆಯೋಗ್ಯ 2’ ಸಿನಿಮಾ ಬ್ರೇಕ್ ಮಾಡಿದ್ದು, ಸ್ಯಾಂಡಲ್‌ವುಡ್ ಮಟ್ಟಿಗೆ ಚಿತ್ರದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. 2018ರಲ್ಲಿ ತೆರೆಕಂಡಿದ್ದ ನೀನಾಸಂ ಸತೀಶ್, ರಚಿತಾ ರಾಮ್ ನಟನೆಯ ‘ಅಯೋಗ್ಯ’ ಚಿತ್ರ ಯಶಸ್ವಿಯಾಗಿತ್ತು. ಹಾಗೆಯೇ, ಚಿತ್ರದ ಹಾಡುಗಳು ಗಮನ ಸೆಳೆದಿದ್ದವು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಕಳೆದ ವರ್ಷ ‘ಅಯೋಗ್ಯ 2’ ಘೋಷಿಸಿದರು. ಮೊದಲ ಭಾಗದಂತೆ ಸೀಕ್ವೆಲ್ ಕೂಡ ಕಮಾಲ್ ಮಾಡಲು ಮುಂದಾಗಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ‘ಅಯೋಗ್ಯ 2’ ಟೀಮ್ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಇದೀಗ ಆನಂದ್ ಆಡಿಯೋ ಸಂಸ್ಥೆಯು 2 ಕೋಟಿಗೆ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಿದೆ. ಇನ್ನು 2018ರಲ್ಲಿ ಬಿಡುಗಡೆಯಾಗಿದ್ದ ‘ಅಯೋಗ್ಯ’ ಚಿತ್ರದ ಆಡಿಯೋ ಹಕ್ಕುಗಳು 9 ಲಕ್ಷಕ್ಕೆ ಮಾರಾಟವಾಗಿತ್ತು. ಆದರೆ, ಇದೀಗ ಅದರ ಸೀಕ್ವೆಲ್ ಅದಕ್ಕಿಂತ 20 ಪಟ್ಟು ಅಂದರೆ, 2 ಕೋಟಿಗೆ ಮಾರಾಟವಾಗಿರುವುದು ವಿಶೇಷ. ‘‘ಅಯೋಗ್ಯ’ ಚಿತ್ರದ ‘ಏನಮ್ಮಿ ಏನಮ್ಮಿ’ ಸಾಂಗ್ 12.5 ಕೋಟಿಗೂ ಅಧಿಕ ವೀಕ್ಷಣೆ ಕಂಡಿದ್ದು, ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ. ಹಾಗೇ ಕನ್ನಡದಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ ಕಂಡ ಮೊದಲ ಸಿನಿಮಾ ಹಾಡು ಎಂಬ ದಾಖಲೆ ಕೂಡ ನಮ್ಮ ಹಾಡಿಗೆ ಸಲ್ಲುತ್ತದೆ. ಇದೀಗ ‘ಅಯೋಗ್ಯ 2’ ಹಾಡುಗಳು ಕೂಡ ಅದ್ಭುತವಾಗಿ ಮೂಡಿಬಂದಿವೆ. ಅರ್ಜುನ್ ಜನ್ಯ ಸಂಗೀತ, ಚೇತನ್ ಕುಮಾರ್ ಸಾಹಿತ್ಯವಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಇನ್ನಷ್ಟು ಭರವಸೆಯಿದೆ. ‘ಅಯೋಗ್ಯ’ ಮೊದಲ ಭಾಗ ಎಲ್ಲಿಗೆ ಮುಗಿದಿತ್ತೋ, ಅದರ ಮರುದಿನದಿಂದ ಸೀಕ್ವೆಲ್ ಕಥೆ ಆರಂಭವಾಗುತ್ತದೆ. ಎರಡು-ಮೂರು ಹೊಸ ಪಾತ್ರಗಳು ಬಿಟ್ಟರೆ, ಮಿಕ್ಕಂತೆ ಎಲ್ಲ ಮೊದಲ ಭಾಗದ ಪಾತ್ರಗಳೇ ಸೀಕ್ವೆಲ್‌ನಲ್ಲೂ ಮುಂದುವರಿಯುತ್ತವೆ’ ಎಂದು ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿ ನೀಡುತ್ತಾರೆ.
"

ಮೊದಲ ಭಾಗದಂತೆಯೇ ‘ಅಯೋಗ್ಯ 2’ ಚಿತ್ರದ ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಭರವಸೆಯಿದೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಒಂದು ವಿಶೇಷ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಪೋಸ್ಟ್-ಪ್ರೊಡಕ್ಷನ್ ಕೂಡ ಶೇ.50ರಷ್ಟು ಮುಗಿದಿದೆ. ಕೆಲವೇ ದಿನಗಳಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ.

— | ನೀನಾಸಂ ಸತೀಶ್, ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net