ರಾಜ್ಯದಲ್ಲೂ ಮೇಳೈಸಿದ ರಾಮಜಪ

CM BSY
Published on

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲೂ ಮಠ-ಮಂದಿರ, ಮನೆಮನೆಗಳಲ್ಲಿ ರಾಮ ಜಪ ಮೇಳೈಸಿತು. ಮಠಾಧೀಶರು, ರಾಮಭಕ್ತರು, ಹಿಂದುಪರ ಸಂಘಟನೆಗಳ ಪ್ರಮುಖರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲೆಂದು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ರಸ್ತೆಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್​ಗಳನ್ನು ಅಳವಡಿಸಿ ಆರತಿ ಬೆಳಗಿ ಪುಷ್ಪಾರ್ಚನೆ ಮಾಡಲಾಯಿತು. ಶ್ರೀರಾಮನ ವೇಷಧಾರಿ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿ ಗಮನ ಸೆಳೆದರು. ಉಡುಪಿ ಕೃಷ್ಣ ಮಠ, ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕೊಲ್ಲೂರು ಶ್ರೀ ಮೂಕಾಂಬಿಕಾ, ಸವದತ್ತಿ ಯಲ್ಲಮ್ಮ, ಮೈಸೂರು ಚಾಮುಂಡೇಶ್ವರಿ ದೇಗುಲ, ಗೋಕರ್ಣ ಆತ್ಮಲಿಂಗ ಸನ್ನಿಧಿ ಮಹಾಬಲೇಶ್ವರ ಮಂದಿರ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾಭಿಷೇಕ ನೆರವೇರಿಸಲಾಯಿತು. ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದ ಬ್ರಹ್ಮಕುಂಡಿಕೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣ ಸಮೀಪದಲ್ಲಿರುವ ಸ್ವಂತ ಜಮೀನನ್ನು ದಾನ ಮಾಡುವ ಜತೆಗೆ ರಾಮ ಮಂದಿರ ನಿರ್ವಣಕ್ಕೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಭೂಮಿಪೂಜೆ ನೆರವೇರಿಸಿದರು.

ನೇರ ಪ್ರಸಾರ ವೀಕ್ಷಿಸಿದ ಸಿಎಂ

ಬೆಂಗಳೂರು: ಕರೊನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯಲ್ಲೇ ಟಿವಿಯಲ್ಲಿ ನೇರ ಪ್ರಸಾರ ವೀಕ್ಷಿಸಿದರು. ಪ್ರಧಾನಿ ಮೋದಿ ನೆರವೇರಿಸಿದ ಭೂಮಿ ಪೂಜೆ, ಶಿಲಾನ್ಯಾಸ ನಂತರ ಸಮಾರಂಭವನ್ನು ಉದ್ದೇಶಿಸಿ ಆರ್​ಎಸ್ ಎಸ್ ಮುಖ್ಯಸ್ಥ ಮೋಹನ ಭಾಗವತ್, ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ಮಾಡಿದ ಭಾಷಣವನ್ನು ಆಲಿಸಿದರು. ಬಿಜೆಪಿ ಕಚೇರಿಯಲ್ಲಿ ಶ್ರೀರಾಮನಿಗೆ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಪೂರ್ವಕವಾಗಿ ರಾಮನಾಮ ಜಪಿಸಿ ನಮಿಸಿದರು.

ಶಬರಿಕೊಳ್ಳದಲ್ಲಿ ವಿಶೇಷ ಪೂಜೆ

ಶ್ರೀರಾಮಚಂದ್ರನ ಪಾದಸ್ಪರ್ಶವಾಗಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿರುವ ಶಬರಿಕೊಳ್ಳದಲ್ಲಿ ಬುಧವಾರ ವಿಶೇಷ ಪೂಜೆ, ಹೋಮ-ಹವನ ನೆರವೇರಿಸಲಾಯಿತು. ಶ್ರೀರಾಮನ ಬರುವಿಕೆಯನ್ನೇ ಕಾದಿದ್ದ ಭಕ್ತೆ ಶಬರಿದೇವಿ ನೆಲೆಸಿದ್ದ ಪುಣ್ಯ ತಾಣವಿದು. ಎಷ್ಟೋ ವರ್ಷಗಳ ನಿರೀಕ್ಷೆಯಂತೆ ರಾಮ ಬಂದಾಗ, ಆತನಿಗೆ ಶಬರಿದೇವಿ ತಿನ್ನಲು ಬೋರೆ ಹಣ್ಣು ನೀಡಿದ ಪ್ರದೇಶವಿದು.

ಶ್ರೀ ರಾಮಮಂದಿರ ನಿರ್ಮಾಣ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಬಳ್ಳಾರಿ ಜಿಲ್ಲೆ ಕೊಟ್ಟೂರು ಬಳಿಯ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧ್ದಂಗರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶ್ರೀ ಪೀಠದ ಗೌರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಂಜನಾದ್ರಿ ಬೆಟ್ಟದಲ್ಲಿ ಹೋಮ

ರಾಮ ಬಂಟ ಹನುಮಂತನ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹೋಮ-ಹವನ, ಪಾರಾಯಣ, ಸಂಕೀರ್ತನ, ಗಾಳಿಪಟ ಹಾರಾಟ ಕಾರ್ಯಕ್ರಮಗಳು ಯುವ ಬ್ರಿಗೇಡ್ ವತಿಯಿಂದ ನಡೆದವು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇತರರು ಪಾಲ್ಗೊಂಡಿದ್ದರು.

ಲಕ್ಷ ತುಳಸಿ ಸಮರ್ಪಣೆ

ಉಡುಪಿಯ ನೀಲಾವರ ಗೋಶಾಲೆಯ ದೇವಳದ ಪ್ರಾಂಗಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯರೂ ಆಗಿರುವ ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಶ್ರೀರಾಮ ವಿಠಲ ದೇವರಿಗೆ ಶ್ರೀಗಳು ಲಕ್ಷ ತುಳಸಿ ಸಮರ್ಪಿಸಿದರು. ಬೃಂದಾವನಸ್ಥ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಗೌರವ ಸಲ್ಲಿಸಲಾಯಿತು.

ಕೃಷ್ಣ ಮಠದ ಕರುವಿಗೆ ರಾಮನಾಮ

ರಾಮ ಮಂದಿರ ಶಿಲಾನ್ಯಾಸ ಸಮಯ ಉಡುಪಿ ಕೃಷ್ಣ ಮಠದ ಗೋಶಾಲೆಯಲ್ಲಿ ದೇಸಿ ತಳಿಯ ಹಸು ಕಪಿಲೆ ಕರುವಿಗೆ ಜನ್ಮ ನೀಡಿದೆ. ಅದಮಾರು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕರುವಿಗೆ ಶ್ರೀರಾಮ ಎಂದು ನಾಮಕಾರಣ ಮಾಡಿ ದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಅಷ್ಟ ಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣ ದೇವರಿಗೆ ಪಟ್ಟಾಭಿರಾಮ ಅಲಂಕಾರ ನೆರವೇರಿಸಿದರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸಿದರು.

ಶ್ರೀರಾಮ ಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ ಬುಧವಾರ ಮá-ಖಪುಟದಲ್ಲಿ ಪ್ರಕಟಿಸಿದ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಬಾಗಲಕೋಟೆಯ ನವನಗರದ ಸೆಕ್ಟರ್ 29ರಲ್ಲಿರá-ವ ಅನೀಲ ತುಪ್ಪದ ಅವರ ಮಕ್ಕಳು ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಧಾರವಾಡ ಜಯನಗರದ ಲೌಕ್ಯ ಅಪಾರ್ಟ್​ವೆುಂಟ್ ನಿವಾಸಿಗಳು ‘ವಿಜಯವಾಣಿ ಮುಖಪುಟ ಇಟ್ಟು ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net