

| ಸುನೀಲ್ ಬಾರ್ಕರ್
ವಲಸೆಯ ಈ ಪ್ರಕ್ರಿಯೆ ಎಲ್ಲ ಜಾತಿಯ ಹಕ್ಕಿಗಳಲ್ಲೂ ಕಂಡುಬರದೇ ಈ ಭೂಮಿಯಲ್ಲಿರುವ 10 ಸಾವಿರ ಜಾತಿಯ ಹಕ್ಕಿಗಳ ಪೈಕಿ ಶೇ.20 ಅಂದರೆ 2 ಸಾವಿರ ಜಾತಿಯ ಹಕ್ಕಿಗಳಿಗಷ್ಟೇ ಸೀಮಿತವಾಗಿದೆ. ತಮ್ಮ ಜೀವನದ ಜೋಕಾಲಿಯನ್ನು ಜೀಕಲು ಬಾನಾಡಿಗಳು ಕೈಗೊಳ್ಳುವ ಪರಿಶ್ರಮದ ವಲಸೆಯ ಸಮಯವೇ ಅವುಗಳ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ್ದು. ವಲಸೆ ಹೋಗುವ ಪಕ್ಷಿಗಳು ಹಿಂತಿರುಗಿ ಬರುವ ಸಂಭಾವ್ಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಹೋಗುತ್ತಿದೆ. ಕೆಲವು ವಲಸೆ ಪಕ್ಷಿಗಳಂತೂ ಕಾಯಮ್ಮಾಗಿ ಈ ಜಗತ್ತಿನಿಂದಲೇ ನಿರ್ಗಮಿಸಿದ್ದು, ಇದಕ್ಕೆಲ್ಲ ಕಾರಣ ಹುಡುಕಹೊರಟರೆ ಬೇಟೆ, ಅರಣ್ಯನಾಶ, ವ್ಯವಸಾಯದಲ್ಲಿ ವಿಪರೀತ ರಾಸಾಯನಿಕಗಳ ಬಳಕೆ ಇವೆಲ್ಲ ಮುಂಚೂಣಿಯಲ್ಲಿ ನಿಲ್ಲುತ್ತವೆ.
ವಲಸೆಯೆಂದ ಮಾತ್ರಕ್ಕೆ ಅದು ಆಗಸಕ್ಕಷ್ಟೇ ಮಿತಿಯಾಗಬೇಕಿಲ್ಲ. ಆಸ್ಟ್ರೇಲಿಯಾದಲ್ಲಿ ಕಂಡುಬರುವ ಹಾರಲಾರದ ಎಮು ಹಕ್ಕಿ ಆಹಾರವನ್ನು ಹುಡುಕುತ್ತ ನಡೆದುಕೊಂಡೇ ಸ್ಥಳೀಯವಾಗಿ ವಲಸೆ ಹೋಗುತ್ತವೆ. ಅದೇ ರೀತಿ ಪೆಂಗ್ವಿನ್ಗಳ ಪೈಕಿ ಕೆಲವು ನೀರಿನಲ್ಲಿ ಈಜಿಕೊಂಡು ಪ್ರಾದೇಶಿಕ ವಲಸೆಯನ್ನು ಕೈಗೊಳ್ಳುತ್ತವೆ.
ಭಾರತಕ್ಕೆ ವಲಸೆ ಬರುವ ಮಾರ್ಗದಲ್ಲಿ ಹಿಮಾಲಯದ ಪರ್ವತಶ್ರೇಣಿಗಳನ್ನು ದಾಟಿ ಬರುವ ಪಟ್ಟಿತಲೆ ಬಾತುಗಳು ಅದಕ್ಕಾಗಿ ಸಮುದ್ರಮಟ್ಟದಿಂದ ಐದೂವರೆ ಮೈಲಿ ಮೇಲೆತ್ತರಕ್ಕೆ ಹಾರಿ ಹೆಚ್ಚು ಎತ್ತರದಲ್ಲಿ ಹಾರುವ ಪಕ್ಷಿಗಳೆನ್ನಿಸಿಕೊಂಡಿವೆ. ಆದರೆ ದಾಖಲೆಗಳ ಮಟ್ಟಿಗೆ ಹೇಳುವುದಾದರೆ 1975ರಲ್ಲಿ ಜೆಟ್ ವಿಮಾನವೊಂದಕ್ಕೆ ಸಮುದ್ರಮಟ್ಟದಿಂದ ಏಳು ಕಿಮಿ ಎತ್ತರದಲ್ಲಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ರಪೆಲ್ಸ್ ಗ್ರಿಫಾನ್ ಹದ್ದು ಇದುವರೆಗೆ ಅತಿ ಹೆಚ್ಚಿನ ಎತ್ತರದಲ್ಲಿ ವಲಸೆ ಪಕ್ಷಿಯೊಂದು ಕಂಡುಬಂದಿರುವ ಖ್ಯಾತಿಗೊಳಗಾಗಿದೆ.
ನಾಲ್ಕು ಗ್ರಾಂನಷ್ಟು ತೂಗುವ ದಾಸರಿ ಹಕ್ಕಿ ಅಥವಾ ಹಮ್ಮಿಂಗ್ ಬರ್ಡ್ ವಲಸೆ ಹೋಗುವ ಪ್ರಪಂಚದ ಪುಟ್ಟ ಹಕ್ಕಿ. ಪ್ರತಿಗಂಟೆ 50 ಕಿ.ಮೀ. ವೇಗದಲ್ಲಿ ಚಲಿಸುವ ಇವುಗಳು ಸತತವಾಗಿ 600 ಮೈಲಿಗಳಷ್ಟು ದೂರ ವಿರಮಿಸದೆ ಹಾರಬಲ್ಲವು. ಒಂದು ಔನ್ಸ್ನಷ್ಟು ತೂಗುವ ನಾರ್ದರ್ನ್ ವಿಟಿಯರ್ ಎಂಬ ಪುಟ್ಟಪಕ್ಷಿ ಆರ್ಕ್ಟಿಕ್ನಿಂದ ಆಫ್ರಿಕಾಗೆ 9 ಸಾವಿರ ಮೈಲಿ ದೂರ ಕ್ರಮಿಸಿ ಪುಟ್ಟ ಹಾಡುಹಕ್ಕಿಗಳ ಪೈಕಿ ಅತಿ ದೂರ ಕ್ರಮಿಸುವ ಪಕ್ಷಿ ಎಂಬ ಖ್ಯಾತಿಗೊಳಗಾಗಿವೆ. ವರ್ಷವೂ ಉತ್ತರಧ್ರುವದಿಂದ ದಕ್ಷಿಣಧ್ರುವಕ್ಕೆ ಪಯಣಿಸುವ ಆರ್ಕ್ಟಿಕ್ ರೀವ ಪಕ್ಷಿ ಮಾರ್ಗಮಧ್ಯದಲ್ಲಿ ಹಲವು ಭೂಪ್ರದೇಶಗಳನ್ನು ಸುತ್ತುತ್ತ ಸಾಗುತ್ತದೆ. ಈ ಹಕ್ಕಿ ವರ್ಷವೊಂದಕ್ಕೆ ಹಾರಾಡುವ ದೂರ 81 ಸಾವಿರ ಕಿಲೋಮೀಟರ್ಗಳು. 30 ವರ್ಷಗಳ ಕಾಲ ಬದುಕುವ ಈ ಪಕ್ಷಿಯ ಜೀವಮಾನದ ಹಾರಾಟವನ್ನು ಲೆಕ್ಕಹಾಕಿದರೆ ಅದರಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಮೂರುಬಾರಿ ಹೋಗಿ ಬರಬಹುದು.
ಪಟ್ಟೆಬಾಲದ ಗಾಡ್ವಿಟ್ಎಂಬ ಪಕ್ಷಿ ತನ್ನ ವಲಸೆಯ ಸಮಯದಲ್ಲಿ 7 ಸಾವಿರ ಮೈಲಿಯಷ್ಟು ದೂರವನ್ನು ಹಗಲು-ರಾತ್ರಿಯೆನ್ನದೆ 8 ದಿನಗಳ ಕಾಲ ವಿರಾಮವಿಲ್ಲದೆ ಕ್ರಮಿಸಿ ದೂರದ ಅವಿರತ ಪ್ರಯಾಣದ ದಾಖಲೆಗೆ ಪಾತ್ರವಾಗಿದೆ. ಪಕ್ಷಿಗಳಲ್ಲಿ ವೇಗದ ಖ್ಯಾತಿ ಕಂದು ಚಾಣಗಳಿಗಿದ್ದರೂ ಅದು ಬೇಟೆಗಾಗಿ ಮುನ್ನುಗುವಾಗ ಮಾತ್ರ. ಆದರೆ ವಲಸೆ ವಿಷಯದಲ್ಲಿ ಈ ಖ್ಯಾತಿ ದೊಡ್ಟಉಲ್ಲಂಕಿಯ ಪಾಲಾಗಿದ್ದು ತನ್ನ 4200 ಮೈಲಿಗಳ ಪಯಣವನ್ನು 60 ಮೈಲಿವೇಗದಲ್ಲಿ ಕ್ರಮಿಸುತ್ತದೆ. ಅಂದಹಾಗೆ ಈ ಉಲ್ಲಂಕಿಯ (snipe) ವೇಗದ ಖ್ಯಾತಿ ಎಷ್ಟೆಂದರೆ ಸ್ವಾತಂತ್ರ್ಯಪೂರ್ವ ಭಾರತದ ಬ್ರಿಟಿಷ್ ಸೈನಿಕರಲ್ಲಿ ಹಾರುತ್ತಿರುವ ಅತಿಹೆಚ್ಚು ಉಲ್ಲಂಕಿಗಳನ್ನು ಬಂದೂಕಿನಿಂದ ಹೊಡೆದುರುಳಿಸುವ ಗುರಿಕಾರರನ್ನು ಠ್ಞಜಿಟಛ್ಟಿ ಎಂಬ ಬಿರುದು ನೀಡಿ ಗೌರವಿಸಲಾಗುತ್ತಿತ್ತು.
(ಲೇಖಕರು ಪಕ್ಷಿತಜ್ಞರು)