

ಭದ್ರಾವತಿ: ಭದ್ರಾ ನದಿ ನೈರ್ಮಲ್ಯ ಹಾಗೂ ಪಾವಿತ್ರೃತೆ ಕಾಪಾಡಲು ಸೆ.30ರಂದು ಬೆಳಗ್ಗೆ 7.30ಕ್ಕೆ ಭದ್ರಾ ಜಲಾಶಯದಿಂದ ಭದ್ರಾವತಿ ನಗರದವರೆಗೂ ನಿರ್ಮಲ ಭದ್ರಾ ಅಭಿಯಾನದಡಿ ಬೃಹತ್ ಜಲಜಾಗೃತಿ-ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ನಿರಂತರ ಹೋರಾಟ ಮಾಡಿದ ಫಲವಾಗಿ ಮಾಲಿನ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕೇಂದ್ರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 2019ರಲ್ಲಿ 600 ನದಿಗಳ ಅಧ್ಯಯನ ಮಾಡಿದ್ದು, ಅವುಗಳಲ್ಲಿ 17 ನದಿಗಳು ಅತಿ ಹೆಚ್ಚು ಮಾಲಿನ್ಯಗೊಂಡಿವೆ. ಅದರಲ್ಲಿ ತುಂಗಾ, ಭದ್ರಾ ನದಿಗಳು ಒಳಗೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾವತಿ ನಗರ ಭಾಗದಲ್ಲಿ ನದಿಗೆ ಕೊಳಚೆ ನೀರು, ತ್ಯಾಜ್ಯ ಸೇರಿ ಮಲಿನವಾಗುತ್ತಿದೆ. ಇದರಿಂದ ಜಲಚರಗಳು ಸಾವಿಗೀಡಾಗುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಆಸಕ್ತರು, ಸಾಧುಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳುವರು ಎಂದರು.
ಜಲಾನಯನ ಅಭಿವೃದ್ಧಿಗೆ ಒತ್ತಾಯ: ನದಿಗಳಲ್ಲಿ ನೀರಿನ ಹರಿವು ಸದಾ ಇರುವಂತೆ ಮಾಡಲು ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ ರೂಪಿಸಲು ಸರ್ಕಾರವನ್ನು ಒತ್ತಾಯಿಸುವುದು. ಜಲಚರಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವುದು. ನಗರ, ಪಟ್ಟಣ, ಗ್ರಾಮಗಳ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರದಂತೆ ಎಲ್ಲ ಕಡೆಗಳಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಒತ್ತಾಯಿಸುವುದು. ಸಾರ್ವಜನಿಕರಲ್ಲಿ ಜನಜಾಗೃತಿ, ಸ್ವಚ್ಛತೆ ಅರಿವು ಮೂಡಿಸುವುದು. ಪಶ್ಚಿಮಘಟ್ಟ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸುವುದು ಪ್ರಮುಖ ಉದ್ದೇಶ ಎಂದು ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಮುಖಂಡ ಗೊಂದಿ ಜಯರಾಂ ಮಾತನಾಡಿ, ಪಾದಯಾತ್ರೆಯು ಭದ್ರಾ ಡ್ಯಾಂನಿಂದ ಸಿಂಗನಮನೆ, ಕುವೆಂಪು ವಿವಿ, ಗೋಣಿಬೀಡು ಶೀಲಸಂಪಾದನಾ ಮಠ, ಹೊನ್ನೆಹಟ್ಟಿ ಹೊಸೂರು, ಕಾಳನಕಟ್ಟೆ, ಹಿರಿಯೂರು, ಬೊಮ್ಮನಕಟ್ಟೆ, ಬುಳ್ಳಾಪುರ ಬೈಪಾಸ್, ವಿದ್ಯಾಮಂದಿರ, ಜನ್ನಾಪುರ ಸರ್ಕಲ್ ಮೂಲಕ ಭದ್ರಾವತಿ ಬಸ್‌ಸ್ಟಾೃಂಡ್ ಸಮೀಪದ ನದಿ ದಡದವರೆಗೆ ಸಾಗಲಿದ್ದು, ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಮುಖರಾದ ಶ್ರೀಪತಿ, ಎಂ.ಶಂಕರ್, ದಿನೇಶ್ ಶೇಟ್, ಬಾಲುನಾಯ್ಡು, ಸೋಮಶೇಖರ್, ಶಿವಾನಂದಮೂರ್ತಿ, ಭೀಮರಾವ್, ಆರ್.ಎಸ್.ಶೋಭಾ ಇತರರಿದ್ದರು.