ಕನ್ನಡ ಸಾಹಿತ್ಯದಿಂದ ಹೋರಾಟದ ಪ್ರಜ್ಞೆ ಜಾಗೃತಿ

kasapa
ಭಾಷೆ- ಸಾಹಿತ್ಯ- ಸಂಸ್ಕೃತಿ, ವರ್ತಮಾನದ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಬಿ.ಎಲ್.ಮುಕುಂದರಾಜ್ ಅವರನ್ನು ಸನ್ಮಾನಿಸಲಾಯಿತು. ಡಿ.ಮಂಜುನಾಥ್, ಡಾ.ಬಸವರಾಜ ನೆಲ್ಲಿಸರ, ಡಾ.ಪ್ರಶಾಂತ ನಾಯಕ, ಡಾ.ನವೀನ್ ಮಂಡಗದ್ದೆ ಮುಂತಾದವರಿದ್ದರು.
Published on

ಶಿವಮೊಗ್ಗ: ಸಂವಿಧಾನದ ಪೀಠಿಕೆಯಲ್ಲಿರುವ ಅಂಶಗಳನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಕನ್ನಡ ಸಾಹಿತ್ಯ ಪ್ರತಿಪಾದಿಸಿತ್ತು. ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ದೊಡ್ಡ ಹಿನ್ನೆಲೆಯಿದೆ. ಕನ್ನಡ ಸಾಹಿತ್ಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಹೋರಾಟದ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್.ಮುಕುಂದರಾಜ್ ಹೇಳಿದರು.

ಕುವೆಂಪು ವಿವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಶಾಖೆ, ಕನ್ನಡ ಭಾರತಿ ಸಹಯೋಗದಲ್ಲಿ ಏರ್ಪಡಿಸಿದ್ದ ‘ಭಾಷೆ- ಸಾಹಿತ್ಯ- ಸಂಸ್ಕೃತಿ, ವರ್ತಮಾನದ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಹೋರಾಟದಲ್ಲಿ ಹಿಂಜರಿಕೆಯ ಅರಿವಾದರೆ ಪಂಪ, ರನ್ನ, ಕುವೆಂಪು, ಬಸವಣ್ಣ ಎಲ್ಲರನ್ನೂ ನೆನಪು ಮಾಡಿಕೊಳ್ಳಬೇಕು. ನಾವು ಏಕಾಂಗಿಗಳಲ್ಲ. ನಮ್ಮ ಹಿಂದೆ ದೊಡ್ಡ ಪರಂಪರೆಯಿದೆ ಎನ್ನುವುದು ನಮಗೆ ತಿಳಿದರೆ ಸಾಕು ಎಂದು ತಿಳಿಸಿದರು.
ಕುವೆಂಪು ಅವರ ಜನತಾ ಪ್ರಜ್ಞೆ, ಆತ್ಮಶ್ರೀ, ವಿಚಾರಕ್ರಾಂತಿಗೆ ಕೃತಿಗಳನ್ನು ಓದಬೇಕು. ವೈಚಾರಿಕ ಪ್ರಜ್ಞೆ ಜಾಗೃತವಾಗುತ್ತದೆ. ಸಾಹಿತ್ಯ, ಪ್ರಭುತ್ವ ಎರಡರ ನಡುವೆ ಸಂಬಂಧವೂ ಇದೆ. ವಿರೋಧವೂ ಇದೆ. ಅಖಂಡ ಕರ್ನಾಟಕ, ಕನ್ನಡ ಸಾಹಿತ್ಯ ಕಟ್ಟುವಲ್ಲಿ ಎಲ್ಲರೂ ಇದ್ದಾರೆ. ನೋವುಂಡವರು, ಅನುಭವಿಗಳು ಎಲ್ಲರೂ ಅಸಂಖ್ಯಾತ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ ಎಂದರು.
ಕನ್ನಡ ಭಾರತಿ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ ಮಾತನಾಡಿ, ಅಕಾಡೆಮಿ ಸೃಜನಶೀಲ ಚಿಂತನೆಗಳೊಂದಿಗೆ ಕೆಲಸ ಮಾಡಬೇಕು. ಕನ್ನಡವನ್ನು ಅನ್ನದ ಪ್ರಜ್ಞೆಯಾಗಿಸಬೇಕು ಎನ್ನುವ ಕೂಗಿಗೆ ಧ್ವನಿಯಾಗಬೇಕು. ಕನ್ನಡ ಕಟ್ಟುವ ಕೆಲಸ ಯುವಜನರಿಂದ ಆಗಬೇಕು. ಅದಕ್ಕೆ ಅಕಾಡೆಮಿ ಜೀವ ತುಂಬಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಸಹ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ನವೀನ್ ಮಂಡಗದ್ದೆ, ಡಾ. ಕುಮಾರ ನಾಯ್ಕ, ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net