ಗ್ರಾಮೀಣ ಜನಜೀವನದ ಅರಿವು ಅಗತ್ಯ

kumadwati
ಶಿಕಾರಿಪುರ ತಾಲೂಕಿನ ಭದ್ರಾಪುರದಲ್ಲಿ ಆಯೋಜಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಹಾಗೂ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆ.ಕುಬೇರಪ್ಪ ಮಾತನಾಡಿದರು.
Published on

ಶಿಕಾರಿಪುರ: ನಾಯಕತ್ವ ಎನ್ನುವುದು ಸಂಘಟಿತ ಪ್ರಯತ್ನ, ಸಹೃದಯತೆ ಹಾಗೂ ಸಾಮಾಜಿಕ ಕಳಕಳಿಯಿಂದ ನಮಗೆ ದೊರೆಯುತ್ತದೆ. ನಾಯಕನಾದವನಿಗೆ ಮುನ್ನಡೆಸುವ ಸಾಮರ್ಥ್ಯ ಇರಬೇಕು ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಸಮನ್ವಯ ಅಧಿಕಾರಿ ಕೆ.ಕುಬೇರಪ್ಪ ಹೇಳಿದರು.

ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಿಂದ ಎನ್‌ಎಸ್‌ಎಸ್, ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕುವ ಕಲೆ ಮತ್ತು ಇನ್ನೊಬ್ಬರನ್ನು ನಾಯಕತ್ವದ ಕಡೆಗೆ ಸೆಳೆಯುವವನು ನಿಶ್ಚಿತವಾಗಿ ನಾಯಕನಾಗುತ್ತಾನೆ ಎಂದರು.

ಹಳ್ಳಿಯ ಪರಿಸರ ನಮ್ಮ ಬದುಕನ್ನು ತಿದ್ದುತ್ತದೆ. ಇಲ್ಲಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚಾರ-ವಿಚಾರಗಳು ನಮಗೆ ಹೆಚ್ಚಿನ ಅರಿವು ಮೂಡಿಸುತ್ತವೆ. ನಮಗೆ ಜೀವನ ಶೈಲಿ ಮತ್ತು ಜೀವನದ ಪಾಠವನ್ನು ಹೇಳಿಕೊಡುತ್ತವೆ. ಶಿಕ್ಷಕರಾಗುವ ಮೊದಲು ಅಧ್ಯಯನಶೀಲರಾಗಬೇಕು. ನಮ್ಮ ಜನರ ಬದುಕಿನ ಅರಿವಿರಬೇಕು. ಜನಪದ ಕಲೆಗಳು, ಜನರ ಸಾಮಾನ್ಯ ಜ್ಞಾನ, ಕೃಷಿಯಲ್ಲಿನ ಅನುಭವ ಹೀಗೆ ಪ್ರತಿಯೊಂದನ್ನೂ ಕಲಿಸುವ ಆಸಕ್ತಿಯಿರಬೇಕು ಎಂದು ತಿಳಿಸಿದರು.

ಕಲಿಕೆಗೆ ಕೊನೆಯಿಲ್ಲ. ಕಲಿಸುವವರು ಸಮರ್ಥರಾದರೆ ಕಲಿಯುವವರೂ ಸಮರ್ಥರಾಗುತ್ತಾರೆ. ಇಂತಹ ಶಿಬಿರಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ. ದೇಶದ ಅಭಿವೃದ್ಧಿ, ಪರಿಸರ ರಕ್ಷಣೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕ ಅಸಮತೋಲನ ನಿವಾರಿಸುವಲ್ಲಿ ನಮ್ಮ ಪಾತ್ರವೇನು ಎಂಬ ಅರಿವು ನಮಗಿರಬೇಕು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಇಂತಹ ಜವಾಬ್ದಾರಿಯುತ ಕೌಶಲವನ್ನು ಕಲಿಸಬೇಕು ಎಂದರು.

ಗ್ರಾಮಗಳ ಉದ್ಧಾರ ನಮ್ಮ ಉದ್ದೇಶ ಎಂಬ ಧ್ಯೇಯವನ್ನು ಕೇವಲ ಶಿಬಿರಕ್ಕೆ ಸೀಮಿತಗೊಳಿಸದೆ, ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಶಿಸ್ತು, ನಂಬಿಕೆ, ಸಮಯಪಾಲನೆ ಮತ್ತಿತರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇವುಗಳನ್ನು ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.

ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎನ್.ಜಿ.ರವಿಕುಮಾರ, ಪೌರತ್ವ ತರಬೇತಿ ಶಿಬಿರದ ಸಂಚಾಲಕ ಡಾ.ಕಿರಣ್‌ಕುಮಾರ್, ಡಾ. ರವಿ, ಎನ್.ಜಿ.ರವಿಕುಮಾರ್, ಡಾ. ವೈ.ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net