

ಶಿವಮೊಗ್ಗ: ಶಿವಮೊಗ್ಗ ಸಂಸ್ಕೃತಿ ಹಾಗೂ ಕಲೆಗಳ ತವರೂರು. ಇಂತಹ ತವರೂರಿನಲ್ಲಿ ಜನಿಸಿದ ನಾವು ಪುಣ್ಯವಂತರು. ಈ ತಾಯಿಯ ಅಂಗಳದಲ್ಲಿ ನಾವುಗಳು ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಗುರುಪುರದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರು ಹಿರಿಯರನ್ನು, ತಂದೆ-ತಾಯಿಯರನ್ನು ಗೌರವಿಸಬೇಕಿದೆ. ಚೆನ್ನಾಗಿ ಓದಬೇಕು. ಸೋಮಾರಿತನ ಬಿಟ್ಟು ಸಂಸ್ಕೃತಿ ಅರಿವು ಹೊಂದಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ. ನಮ್ಮ ಧರ್ಮ ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದರು. ಶ್ರೀ ಸಾಯಿನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶಿವಮೊಗ್ಗ ಶಾಖೆಯ ನಿರ್ದೇಶಕರು, ಪ್ರಾಚಾರ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಬಿಜಿಎಸ್ ಕಲಾ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.