ನಾಗರಿಕ ಕರ್ತವ್ಯಪ್ರಜ್ಞೆಯ ಜಾಗೃತಿ

Untitled design (2)
Published on

ಜಗತ್ತು ಭಾರತದ ಪಥವನ್ನು ಅನುಸರಿಸಲು, ಭಾರತದಿಂದ ಪ್ರೇರಣೆ ಪಡೆಯಲು ಉತ್ಸುಕರಾಗಿರುವಾಗ ಮತ್ತೊಂದೆಡೆ ಭಾರತೀಯರು ಸ್ವಂತಿಕೆಯನ್ನು ತೊರೆದು ಪಾಶ್ಚಿಮಾತ್ಯ ಚಿಂತನೆ, ಪದ್ಧತಿಗಳತ್ತ ಹೊರಳುವುದು ವಿಪರ್ಯಾಸ. ಆದರೆ, ಸರಿಯಾದ ದಾರಿಯಾವುದು, ಅದರಲ್ಲಿ ಸಾಗಬೇಕಾದ ಪರಿ ಹೇಗೆ ಎಂಬುದರ ಬಗ್ಗೆ ತಾತ್ವಿಕ ಹಿನ್ನೆಲೆಯ ಜತೆಗೆ ಸ್ಪಷ್ಟ ಚಿಂತನೆಯನ್ನೂ ಒದಗಿಸುತ್ತದೆ ಚರಿತಪಂಚಕ ಕೃತಿ. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಮತ್ತು ಪೋಷಣೆಯನ್ನು ಒದಗಿಸಿದ್ದ ಹಿಂದೂ ಕುಟುಂಬಪದ್ಧತಿಯ ಪುನಃಸ್ಥಾಪನೆಯ ಅವಶ್ಯಕತೆ, ಸಕಲ ಜೀವಜಾಲವನ್ನೂ ಪೊರೆಯುತ್ತಿರುವ ಪಂಚಭೂತಾತ್ಮಕವಾದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ, ಪ್ರತಿಯೊಬ್ಬರ ಗೌರವಪೂರ್ಣ ಬದುಕಿಗೆ ದಾರಿಮಾಡುವ ಸಾಮಾಜಿಕ ಸಾಮರಸ್ಯ ಸಾಧನೆಯ ಮಾರ್ಗಗಳು, ಸ್ವಂತಿಕೆಯ ಮೂಲಕ ಸ್ವಾವಲಂಬನೆ ಸಾಧಿಸಲು ಕಾರಣವಾಗಬಲ್ಲ ಸ್ವದೇಶೀ ಮಾರ್ಗದ ಅನುಸರಣೆ, ಎಲ್ಲರ ಹಕ್ಕುಗಳನ್ನೂ ಖಾತ್ರಿಪಡಿಸುವ ನಾಗರಿಕ ಕರ್ತವ್ಯಪ್ರಜ್ಞೆಯ ಜಾಗರಣ ಮತ್ತು ಇವುಗಳ ಕುರಿತು ಒಂದಿಷ್ಟು ಚಿಂತನ-ಮಂಥನಕ್ಕೆ ಬೇಕಾದ ಆಕರ ಸಾಮಗ್ರಿಯನ್ನು ಪರಿಣಾಮಕಾರಿಯಾಗಿ ಒದಗಿಸಿಕೊಡುತ್ತದೆ ‘ಚರಿತಪಂಚಕ’.

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ತನ್ನ ಕರ್ತವ್ಯಪರಿಧಿಯನ್ನು ವಿಸ್ತರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಕುಟುಂಬಪದ್ಧತಿಯ ಕುರಿತು ಜನಸಾಮಾನ್ಯ ರಲ್ಲಿ ಜಾಗೃತಿ ಮೂಡಿಸುವುದು, ಕೌಟುಂಬಿಕ ಮೌಲ್ಯಗಳು, ಸಂಬಂಧಗಳ ಪುನಃಸ್ಥಾಪನೆಗೆ ಒತ್ತುನೀಡುವುದು, ಪರಿಸರದ ಕುರಿತು ಭಾರತೀಯ ದೃಷ್ಟಿಯನ್ನು ವಿವರಿಸುವುದು, ಸಾಮರಸ್ಯವನ್ನು ಉತ್ತೇಜಿಸುವುದು, ಸ್ವದೇಶಿ ಮಾರ್ಗದ ಮಹತ್ವವನ್ನು ತಿಳಿಸುವುದು ಸೇರಿದಂತೆ ನಾಗರಿಕ ಶಿಷ್ಟಾಚಾರಗಳನ್ನು ಕುರಿತು ಭಾರತೀಯ ದೃಷ್ಟಿ-ಚಿಂತನೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ.

ವಿಶಿಷ್ಟ ಮತ್ತು ಆಪ್ತ ಬರಹಶೈಲಿಯಿಂದ ಓದುಗರಿಗೆ ಪರಿಚಿತರಾಗಿರುವ ನಾರಾಯಣ ಶೇವಿರೆ ಅವರು ಪ್ರಸ್ತುತ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ವಿಹಿತವಿದ್ಯಾ’, ‘ಉಪಾಸನೆ’, ‘ಆಕೂತ’, ‘ಅವಿಖ್ಯಾತ ಸ್ವರಾಜ್ಯಕಲಿಗಳು’ ‘ದೇಶೀ ದಿಶೆ’, ‘ಬಿಡುಗಡೆಯ ಮಿಂಚು’ ಕೃತಿಗಳನ್ನು ರಚಿಸಿದ್ದಾರೆ. ಚರಿತಪಂಚಕ ಕೃತಿ ಭಾವಜಾಗರಣ ಅಭಿಯಾನಕ್ಕೆ ಆಕರಸಾಮಗ್ರಿಯೆಂಬಂತೆ ಸಿದ್ಧವಾಗಿದ್ದು, ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಇದನ್ನು ಪ್ರಕಟಿಸಿದೆ. ಕುಟುಂಬ ಪ್ರಬೋಧನದಲ್ಲಿ ಭಾವಸ್ವರೂಪೀ ಮನೆ, ಘಟಕವಾಗಿ ಮನೆಯ ವಿಸ್ತರಣೆ, ಸಂಸ್ಕಾರದ ಆಯಾಮ ಸೇರಿದಂತೆ ಆರು ಅಧ್ಯಾಯಗಳಿದ್ದು, ಪರಿಸರ ಸಂರಕ್ಷಣೆ ಬಗೆಗೂ ಆರು ಅಧ್ಯಾಯಗಳಿವೆ. ಒಟ್ಟಾರೆ ದೇಶದ ಸಾಂಸ್ಕೃತಿಕ ನೆಲೆಯನ್ನು, ಅದಕ್ಕೆ ಬೆಸೆದುಕೊಂಡಿರುವ ನಾಗರಿಕರ ಬದುಕನ್ನು ವಿವರಿಸುತ್ತ ನಮ್ಮತನದೆಡೆಗೆ ಸಾಗುವ ಅಗತ್ಯತೆ ಮತ್ತು ಅದರಲ್ಲಿ ಇರುವ ಸಾರ್ಥಕತೆಯನ್ನು ಈ ಕೃತಿ ಕಟ್ಟಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net