

ಬೇಲೂರು: ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ನೇತೃತ್ವದಲ್ಲಿ ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದರು.
ನಮ್ಮ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತೆ, ನೈರ್ಮಲ್ಯ ಸೇರಿದಂತೆ ಇತರ ವಿಭಾಗ ಹಾಗೂ ನರೇಗಾ ಯೋಜನೆಯಲ್ಲಿ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದ್ದರಿಂದ ನಮ್ಮ ಗ್ರಾಮ ಪಂಚಾಯಿತಿಗೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ ಎಂದು ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ‘ವಿಜಯವಾಣಿ’ಗೆ ತಿಳಿಸಿದರು.
ಮುಂದಿನ ದಿನಗಳಲ್ಲೂ ಈಗ ಮಾಡಿರುವ ಕೆಲಸ ಕಾರ್ಯಗಳಿಗಿಂತಲೂ ಇನ್ನೂ ಹೆಚ್ಚಿನ ಕೆಲಸ ಮಾಡಲು ಮತ್ತು ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಇಬ್ಬೀಡು ಗ್ರಾಮ ಪಂಚಾಯಿತಿ ಸದಸ್ಯರಾದ ಐ.ಜಿ.ಲೋಕೆಶ್, ಜಯಣ್ಣ, ಮಂಜುಳಾ ರಮೇಶ್, ಈರಪ್ಪ, ಪಾಲಾಕ್ಷ, ನವೀನ ಅಣ್ಣಪ್ಪ, ಸಾವಿತ್ರಮ್ಮ ಮಂಜುನಾಥ್, ಮಮತಾ, ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಕಾರ್ಯದರ್ಶಿ ದೇವರಾಜ್, ಮಾಜಿ ಸದಸ್ಯ ಮಂಜುನಾಥ್ ನೆಟ್ಟೆಕೆರೆ ಇತರರಿದ್ದರು.