ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲಹಳ್ಳಿ ತಂಡಕ್ಕೆ ಪ್ರಶಸ್ತಿ

HUN-DEC-10-2(PALAHALLI TEAM)
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಹಳೇಬೀಡು ಗ್ರಾಮದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ 7ನೇ ವರ್ಷದ ಕಾರ್ತಿಕ ಮಾಸದ ಸಂಭ್ರಮಾಚರಣೆ ಅಂಗವಾಗಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸವಿನೆನಪಿಗಾಗಿ ಆಯೋಜಿಸಿದ್ದ 2ನೇ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ತಂಡ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಗಳಿಸಿತು.


ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಹುಣಸೂರು ತಾಲೂಕಿನ ಬೆಟ್ಟದೂರು ಗ್ರಾಮದ ತಂಡ ದ್ವಿತೀಯ ಸ್ಥಾನ ಹಾಗೂ ಬನ್ನಿಕುಪ್ಪೆ ತಂಡ ತೃತೀಯ ಸ್ಥಾನ ಗಳಿಸಿದವು. ಪಂದ್ಯಾವಳಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.


ಶ್ರೀ ಮಲೆ ಮಹದೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಚ್.ಡಿ.ಶೇಖರ್ ಮಾತನಾಡಿ, ಇತಿಹಾಸ ಪ್ರಸಿದ್ಧ ಈ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಡಿ.11ರಂದು ಕಾರ್ತಿಕ ಮಾಸದ ಕಡೆಯ ಸೋಮವಾರದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಸಾದ ಸ್ವೀಕರಿಸಲಿದ್ದಾರೆ. ಅಲ್ಲದೆ, ಸ್ವಾಮಿಗೆ ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಪಂದ್ಯಾವಳಿಯನ್ನು ಹಳೇಬೀಡು ಗ್ರಾಪಂ ಅಧ್ಯಕ್ಷೆ ಶ್ರುತಿ ಮಂಜುನಾಥ್ ಮತ್ತು ಉಪಾಧ್ಯಕ್ಷ ವಿ.ಮಲ್ಲೇಶ್ ಉದ್ಘಾಟಿಸಿದರು.
ಉದ್ಯಮಿ ಗೌರಿಶಂಕರ್, ಸಮಿತಿ ಉಪಾಧ್ಯಕ್ಷ ಎಚ್.ವಿ.ರಮೇಶ್, ಎಚ್.ಜೆ.ಮಹದೇವಶೆಟ್ಟಿ, ಎಚ್.ಆರ್.ಶಿವರಾಜು, ಎಚ್.ಸಿ.ಮಂಜು, ಶ್ರೀನಿವಾಸನಾಯಕ, ಎಚ್.ವಿ.ಪರಶುರಾಮ್, ಚಂದ್ರಗೌಡ, ಹೇಮಚಂದ್ರ, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net